ADVERTISEMENT

ಮುಂಬೈ ರೈಲು ಸ್ಫೋಟ ಪ್ರಕರಣ: 12ಅಪರಾಧಿಗಳ ಖುಲಾಸೆಗೊಳಿಸಿದ್ದ HC ತೀರ್ಪಿಗೆ SC ತಡೆ

ಪಿಟಿಐ
Published 24 ಜುಲೈ 2025, 7:25 IST
Last Updated 24 ಜುಲೈ 2025, 7:25 IST
<div class="paragraphs"><p>2006ರ ಮುಂಬೈ ರೈಲು ಸ್ಫೋಟ ಪ್ರಕರಣದ ತಪ್ಪಿತಸ್ಥರು</p></div>

2006ರ ಮುಂಬೈ ರೈಲು ಸ್ಫೋಟ ಪ್ರಕರಣದ ತಪ್ಪಿತಸ್ಥರು

   

ನವದೆಹಲಿ: 2006ರಲ್ಲಿ 180ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಮುಂಬೈ ರೈಲು ಸ್ಫೋಟ ಪ್ರಕರಣದ 12 ತಪ್ಪಿತಸ್ಥರನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.

‘ಹೈಕೋರ್ಟ್ ಆದೇಶವನ್ನು ಅಂತಿಮ ಎಂದು ಪರಿಗಣಿಸದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 12 ಆರೋಪಿಗಳನ್ನು ಮರಳಿ ಜೈಲಿಗೆ ಕರತರಬೇಕು’ ಎಂದು ನ್ಯಾ. ಎಂ.ಎಂ. ಸುಂದ್ರೇಶ್ ಮತ್ತು ನ್ಯಾ. ಎನ್‌. ಕೋಟೇಶ್ವರ್‌ ಸಿಂಗ್ ಅವರಿದ್ದ ಪೀಠ ಹೇಳಿತು. ಎಲ್ಲಾ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ಮೇಲ್ಮನವಿ ಸಲ್ಲಿಸಿದ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿತು.

ADVERTISEMENT

‘ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದ್ದು, ಅವರೆಲ್ಲರನ್ನೂ ಮರಳಿ ಜೈಲಿಗೆ ಕರೆತರಬೇಕು. ಆದಾಗ್ಯೂ, ಸಾಲಿಸಿಟರ್ ಜನರಲ್ ಅವರು ಕಾನೂನಿನ ಪ್ರಶ್ನೆ ಎತ್ತಿದ್ದು,  ಆಕ್ಷೇಪಾರ್ಹ ತೀರ್ಪನ್ನು ಪೂರ್ವನಿರ್ದೇಶನ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಈ ಆಕ್ಷೇಪಾರ್ಹ ತೀರ್ಪಿಗೆ ತಡೆ ನೀಡಲಾಗುವುದು’ ಎಂದು ಪೀಠ ಹೇಳಿತು.

ಮಹಾರಾಷ್ಟ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.

2006ರಲ್ಲಿ ನಡೆದ ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ 12 ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ಆರೋಪಿಸಿತ್ತು.

2006ರ ಜುಲೈ 11ರಂದು ಮುಂಬೈ ಲೋಕಲ್‌ ರೈಲು ಸಂಚರಿಸುವ ಹಲವು ಮಾರ್ಗಗಳಲ್ಲಿ ಏಳು ಕಡೆ ಸ್ಫೋಟ ಸಂಭವಿಸಿ 180ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 12 ಆರೋಪಿಗಳನ್ನು ತಪ್ಪಿತಸ್ಥರು ಎಂದು ಅಭಿಪ್ರಾಯಪಟ್ಟಿದ್ದ ವಿಶೇಷ ನ್ಯಾಯಾಲಯ 2015ರಲ್ಲಿ ಶಿಕ್ಷೆ ಪ್ರಕಟಿಸಿತ್ತು. ಐವರಿಗೆ ಮರಣದಂಡನೆ ಮತ್ತು ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ‘ಈ ಪ್ರಕರಣದಲ್ಲಿ 12 ಆರೋಪಿಗಳ ವಿರುದ್ಧ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ಬಾಂಬ್‌ ಸ್ಫೋಟ ಇವರೇ ನಡೆಸಿದ್ದಾರೆ ಎಂದು ನಂಬುವುದು ತೀರಾ ಕಷ್ಟ’ ಎಂದು ನ್ಯಾ. ಅನಿಲ್ ಕಿಲೋರ್ ಮತ್ತು ನ್ಯಾ. ಶ್ಯಾಮ್ ಚಂಡಕ್ ಅವರನ್ನೊಳಗೊಂಡ ವಿಶೇಷ ಪೀಠವು ಅಭಿಪ್ರಾಯಪಟ್ಟಿತು.

ಹೈಕೋರ್ಟ್‌ನ ಈ ತೀರ್ಪು ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಈ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡವರಲ್ಲಿ ನಿಷೇಧಿತ ಸಿಮಿ ಸದಸ್ಯರು ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತಯಬಾ ಸಂಘಟನೆಗೆ ಸೇರಿದವರು ಇದ್ದಾರೆ ಎಂದು ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ಮಾಹಿತಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.