ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ಸಶಸ್ತ್ರ ಪಡೆಯ ಯೋಧರು ಗಸ್ತು ತಿರುಗಿದರು
ಪಿಟಿಐ ಚಿತ್ರ
ಕೋಲ್ಕತ್ತ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳ ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಜಫರಾಬಾದ್‌ನ ತಂದೆ ಹಾಗೂ ಮಗನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಇಂಜಾಮುಲ್ ಹಕ್ ಬಂಧಿತ ಆರೋಪಿ. ಈತನನ್ನು ಸುತಿ ಪ್ರದೇಶದಲ್ಲಿ ಬುಧವಾರ ರಾತ್ರಿ ವಶಕ್ಕೆ ಪಡೆಯಲಾಯಿತು ಎಂದು ದಕ್ಷಿಣ ಬಂಗಾಳದ ಎಡಿಜಿಪಿ ಸುಪ್ರತಿಮ್ ಸರ್ಕಾರ್ ಹೇಳಿದ್ದಾರೆ.
‘ಈತ ಘೋರ ಅಪರಾಧ ಕೃತ್ಯದ ಯೋಜನೆ ರೂಪಿಸಿದ್ದು ಮಾತ್ರವಲ್ಲ, ಸಾಕ್ಷ್ಯ ನಾಶದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾನೆ. ಕೃತ್ಯ ನಡೆಯುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದು ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ದ್ವಂಸ ಮಾಡಿದ್ದಾನೆ’ ಎಂದು ತಿಳಿಸಿದ್ದಾರೆ.
ಕಳೆದ ಶುಕ್ರವಾರ ನಡೆದ ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪ ಪಡೆದ ಸಂದರ್ಭದಲ್ಲಿ ಹರಗೋಬಿಂದೊ ದಾಸ್ (72) ಮತ್ತು ಅವರ ಮಗ ಚಂದನ್ (40) ಅವರನ್ನು ಇರಿದು ಕೊಲ್ಲಲಾಗಿತ್ತು. ಈ ಕೊಲೆಯು ಪೂರ್ವ ಯೋಜಿತವೇ ಅಥವಾ ಘಟನೆಯ ಸಂದರ್ಭದಲ್ಲಿ ಉದ್ರಿಕ್ತ ಗುಂಪು ನಡೆಸಿದ್ದೇ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದರು. ಇದಕ್ಕಾಗಿ 11 ಸಿಬ್ಬಂದಿಯನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ಪೊಲೀಸ್ ಇಲಾಖೆ ರಚಿಸಿತ್ತು. ಡಿಐಜಿ ಸಯ್ಯದ್ ವಕಾರ್ ರಾಜಾ ಅವರು ಇದರ ಉಸ್ತುವಾರಿ ವಹಿಸಿದ್ದಾರೆ.
ಘಟನೆಯಲ್ಲಿ ಈವರೆಗೂ ಮೂವರು ಮೃತಪಟ್ಟಿದ್ದಾರೆ. ಗಲಭೆ ನಂತರ ಬಹಳಷ್ಟು ಹಿಂದೂ ಕುಟುಂಬಗಳು ಪಕ್ಕದ ಜಿಲ್ಲೆ ಹಾಗೂ ರಾಜ್ಯಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ.
‘ಈವರೆಗೂ 278 ಜನರನ್ನು ಬಂಧಿಸಲಾಗಿದೆ. ಇಂಥ ಹೀನ ಕೃತ್ಯ ಎಸಗಿದ ಯಾರೊಬ್ಬರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಡಿಜಿಪಿ ಹೇಳಿದ್ದಾರೆ.
‘ಜಿಲ್ಲೆ ತೊರೆದಿದ್ದವರಲ್ಲಿ 85 ಕುಟುಂಬಗಳು ಮರಳಿವೆ. ಇವರು ಸುರಕ್ಷಿತವಾಗಿ ಜೀವನ ನಡಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ನಿರಂತವಾಗಿ ನಡೆಸಲಾಗುತ್ತಿದೆ. ಶೇ 70ರಷ್ಟು ಅಂಗಡಿಗಳು ಬಾಗಿಲು ತೆರೆದು ಎಂದಿನಂತೆಯೇ ವಹಿವಾಟು ನಡೆಸಿವೆ. ಜನರಲ್ಲಿ ನಿಧಾನವಾಗಿ ಆತ್ಮವಿಶ್ವಾಸ ಹೆಚ್ಚಾಗಿದೆ’ ಎಂದು ಸರ್ಕಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.