ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್
ನವದೆಹಲಿ: ‘ಭಾರತ ಮತ್ತು ಅಮೆರಿಕದ ನಡುವೆ ಉತ್ತಮ ಬಾಂಧವ್ಯವಿದ್ದು, ಉಭಯ ದೇಶಗಳ ನಡುವೆ ಸ್ವಾಭಾವಿಕ ಪಾಲುದಾರಿಕೆ ಇದೆ. ಹಾಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಲು ನಾನು ಕಾತುರನಾಗಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ಮಧ್ಯೆ ಉತ್ತಮ ಬಾಂಧವ್ಯವಿದ್ದು ಸ್ವಾಭಾವಿಕ ಪಾಲುದಾರಿಕೆಯನ್ನು ಹೊಂದಿವೆ. ವಾಪಾರ ಮಾತುಕತೆ ಕುರಿತು ಶೀಘ್ರದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ಉಭಯ ದೇಶಗಳು ಶ್ರಮಿಸುತ್ತಿವೆ ಎಂದು ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಉಭಯ ದೇಶಗಳ ಜನರಿಗೆ ಉಜ್ವಲ ಸಮೃದ್ಧ ಭವಿಷ್ಯವನ್ನು ಖಚಿತಪಡಿಸಲು ಭಾರತ–ಅಮೆರಿಕ ಒಟ್ಟಿಗೆ ಕೆಲಸ ಮಾಡಲಿವೆ ಎಂದು ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ದೇಶಗಳು ವ್ಯಾಪಾರ ಮಾತುಕತೆ ಕುರಿತು ಶೀಘ್ರವಾಗಿ ಅಂತಿಮ ತೀರ್ಮಾನಕ್ಕೆ ಬರಲಿವೆ. ಮುಂಬರುವ ವಾರಗಳಲ್ಲಿ ಉತ್ತಮ ಸ್ನೇಹಿತರಾಗಿರುವ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲು ಎದುರು ನೋಡುತ್ತಿದ್ದೇನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಟ್ರುತ್’ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್ ಕುರಿತು ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ವರ್ಷದ ಫೆಬ್ರುವರಿಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಜತೆಗೆ, ರಕ್ಷಣಾ ವ್ಯವಸ್ಥೆಯ ಬಲವರ್ಧನೆ, ವಾಣಿಜ್ಯ-ವ್ಯಾಪಾರ, ಇಂಧನ, ಮೂಲಸೌಕರ್ಯ, ತಂತ್ರಜ್ಞಾನ ವೃದ್ಧಿ ಸೇರಿದಂತೆ ವ್ಯಾಪಾರ ಒಪ್ಪಂದದ ಮೊದಲ ಹಂತದ ಮಾತುಕತೆ ನಡೆಸುವ ಯೋಜನೆಯನ್ನು ಘೋಷಿಸಿದ್ದರು.
ಈಚೆಗೆ ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕದ ಬೆದರಿಕೆಗೆ ಭಾರತ ಮಣಿಯದ ಬೆನ್ನಲ್ಲೇ, ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡ 25ರಷ್ಟು ಸುಂಕ ಹೇರುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದರು.
ವಿನಾಯಿತಿ ಪಟ್ಟಿಯಲ್ಲಿರುವ ಕೆಲ ಸರಕುಗಳನ್ನು ಹೊರತುಪಡಿಸಿದಂತೆ, ಭಾರತದ ಮೇಲೆ ಹೇರಲಾದ ಸುಂಕದ ಪ್ರಮಾಣ ಶೇ 50ಕ್ಕೆ ಏರಿದಂತಾಗಿದೆ. ಟ್ರಂಪ್ ಅವರ ಈ ನಡೆಯು, ಜವಳಿ, ಸಾಗರ ಹಾಗೂ ಚರ್ಮ ಉತ್ಪನ್ನಗಳ ರಫ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದಿಂದ ಅಮೆರಿಕಕ್ಕೆ ₹7.5 ಲಕ್ಷ ಕೋಟಿ (86 ಶತಕೋಟಿ ಡಾಲರ್) ಮೌಲ್ಯದಷ್ಟು ಸರಕುಗಳ ರಫ್ತು ಆಗುತ್ತದೆ. ಹೆಚ್ಚುವರಿ ಸುಂಕ ಈ ರಫ್ತಿನ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತವು, ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾಕ್ಕೆ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಟ್ರಂಪ್ ದೂರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.