ADVERTISEMENT

ಸುಂಕ ಕಡಿತ & ವ್ಯಾಪಾರ ಒಪ್ಪಂದ: ಟ್ರಂಪ್ ಎದುರು ಫಲಿಸಿತು ಮೋದಿ ತಂತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2026, 11:51 IST
Last Updated 3 ಫೆಬ್ರುವರಿ 2026, 11:51 IST
<div class="paragraphs"><p> ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ</p></div>

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ

   

ನವದೆಹಲಿ: ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತದಿಂದ ಆಮದು ಆಗುವ ಸರಕುಗಳ ಮೇಲಿನ ಸುಂಕ ಕಡಿತ, ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಅಂತಿಮಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಘೋಷಿಸಿದ್ದಾರೆ. ಅಮೆರಿಕವು ಪ್ರತಿಸುಂಕವನ್ನು ಶೇ 25ರಿಂದ ಶೇ 18ಕ್ಕೆ ಇಳಿಸಲಿದೆ. ಅದೇ ರೀತಿ ಅವರು (ಮೋದಿ ಕೂಡ, ಅವರ ಸುಂಕವನ್ನು ಕಡಿತಗೊಳಿಸಲಿದ್ದಾರೆ. ಮತ್ತು ಸುಂಕಯೇತರ ಅಡೆತಡೆಗಳನ್ನು ಸಂಪೂರ್ಣವಾಗಿ ನಿವಾರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಟ್ರಂಪ್‌ ಅವರು ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾದ ನಂತರದಲ್ಲಿ, ಭಾರತದಿಂದ ಆಮದು ಆಗುವ ಸರಕುಗಳಿಗೆ ಶೇಕಡ 50ರಷ್ಟು ಸುಂಕ ವಿಧಿಸಿದ್ದರು. ಈ ಪೈಕಿ ಶೇ 25ರಷ್ಟು ‘ಪ್ರತಿಸುಂಕ’ದ ರೀತಿಯಲ್ಲಿದೆ. ಇನ್ನುಳಿದ ಶೇ 25ರಷ್ಟು ಸುಂಕವನ್ನು, ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಹೇರಲಾಗಿತ್ತು.

‘ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ಹಾಗೂ ಅಮೆರಿಕದ ಸರಕುಗಳಿಗೆ ಶೂನ್ಯ ಸುಂಕ ವಿಧಿಸಿದರೆ ಭಾರತದ ಸರಕುಗಳ ಮೇಲಿನ ಸುಂಕವನ್ನು ಪ್ರಸ್ತುತ ಶೇ 50ರಿಂದ ಶೇ 18ಕ್ಕೆ ಇಳಿಸಲಾಗುವುದು’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರು ವ್ಯವಹಾರದ ಬಗ್ಗೆ ಬಲವಾದ ತಿಳಿವಳಿಕೆ ಹೊಂದಿರುವ ನಿಜವಾದ ಗುಜರಾತಿಯಂತೆ, ಕಾರ್ಯತಂತ್ರದ ಗುಟ್ಟನ್ನು ಕಾಯ್ದುಕೊಳ್ಳುವುದು, ರಾಜತಾಂತ್ರಿಕತೆಯ ಮೂಲಕ ಅಂದುಕೊಂಡದ್ದನ್ನು ಸಾಧಿಸಿದ್ದಾರೆ ಎಂದರೆ ತಪ್ಪಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಜಾಗತಿಕ ಬಿಕ್ಕಟ್ಟಿನ ನಡುವೆಯೂ ಯಾವುದೇ ಸಂಘರ್ಷವಿಲ್ಲದೆ ಮೋದಿ ಅವರು ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತಲೂ ಭಾರತಕ್ಕೆ ಕಡಿಮೆ ಸುಂಕ ವಿಧಿಸುವಂತೆ ಮಾಡಿದ್ದಾರೆ. ನೆರೆಯ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ಮೇಲುಗೈ ಸಾಧಿಸಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇಕಡ 50ರಿಂದ ಶೇಕಡ 18ಕ್ಕೆ ಇಳಿಸಲಾಗುತ್ತದೆ. ವಿಯೆಟ್ನಾಂಗೆ ಶೇ 20, ಬಾಂಗ್ಲಾದೇಶಕ್ಕೆ ಶೇ 20, ಪಾಕಿಸ್ತಾನಕ್ಕೆ ಶೇ 18, ಮಲೇಷ್ಯಾಕ್ಕೆ ಶೇ 19, ಕಾಂಬೋಡಿಯಾ ಶೇ 19, ಥಾಯ್ಲೆಂಡ್‌ ಶೇ 19 ಹಾಗೂ ಚೀನಾದ ಮೇಲೆ ಶೇ 37ರಷ್ಟು ಸುಂಕವನ್ನು ಅಮೆರಿಕ ವಿಧಿಸುತ್ತಿದೆ. ನೆರೆಯ ಬಾಂಗ್ಲಾ, ಪಾಕಿಸ್ತಾನ, ಚೀನಾಗಿಂತಲೂ ಭಾರತದ ಮೇಲಿನ ಅಮೆರಿಕ ಸುಂಕ ಕಡಿಮೆಯಾಗಿದೆ.

ಡೊನಾಲ್ಡ್‌ ಟ್ರಂಪ್‌ ಅವರು ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾದ ನಂತರದಲ್ಲಿ, ಭಾರತದಿಂದ ಆಮದು ಆಗುವ ಸರಕುಗಳಿಗೆ ಶೇಕಡ 50ರಷ್ಟು ಸುಂಕ ವಿಧಿಸಿದ್ದರು. ಈ ಪೈಕಿ ಶೇ 25ರಷ್ಟು ‘ಪ್ರತಿಸುಂಕ’ದ ರೀತಿಯಲ್ಲಿದೆ. ಇನ್ನುಳಿದ ಶೇ 25ರಷ್ಟು ಸುಂಕವನ್ನು, ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಹೇರಲಾಗಿತ್ತು.

ಇದೇ ವಿಚಾರಕ್ಕೆ ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ನನೆಗುದಿಗೆ ಬಿದ್ದಿತ್ತು. ಈ ಸಂಬಂಧ ಉಭಯ ದೇಶಗಳು ಹಲವು ಸುತ್ತಿನ ಮಾತುಕತೆ ನಡೆಸಿದರೂ ಯಾವುದೂ ಫಲಪ್ರದವಾಗಿರಲಿಲ್ಲ. ‘ಭಾರತ–ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ’ ಎಂದು ಟ್ರಂಪ್‌ ಹೇಳಿಕೊಂಡ ಬಳಿಕ ಮತ್ತು ಅಮೆರಿಕವು ನೂತನ ವಲಸೆ ನೀತಿ ಜಾರಿಗೊಳಿಸಿದ ನಂತರ ಉಭಯ ದೇಶಗಳ ನಡುವಣ ಸಂಬಂಧದಲ್ಲಿ ಬಿರುಕು ಮೂಡಿತ್ತು.

ಮೋದಿ ಅವರು ಟ್ರಂಪ್ ಅವರ ಪ್ರಚೋದನೆ, ಷರತ್ತುಗಳಿಗೆ ತಕ್ಕಂತೆ ವಿಚಲಿತರಾಗದೇ ತಾಳ್ಮೆಯಿಂದ ಕೆಲಸ ಮಾಡುತ್ತಿದ್ದರು. ಇದೀಗ ಅಚ್ಚರಿ ಎಂಬಂತೆ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ. ಹಾಗೂ ಕಡಿತವೂ ಆಗಿದೆ ಎನ್ನುತ್ತಾರೆ ತಜ್ಞರು.

ಆದಾಗ್ಯೂ, ಒಪ್ಪಂದದ ವಿವರಗಳು ಅಸ್ಪಷ್ಟವಾಗಿಯೇ ಉಳಿದಿವೆ. ಟ್ರಂಪ್ ಮತ್ತು ಮೋದಿ ಅವರ ನಿರೂಪಣೆಗಳು ವಿಭಿನ್ನವಾಗಿವೆ. ಪ್ರಧಾನಿ ಮೋದಿ ಅವರು ವ್ಯಾಪಾರ ಒಪ್ಪಂದ ಅಂತಿಮಗೊಂಡ ಬಗ್ಗೆ ಅಥವಾ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಸ್ಪಷ್ಟಪಡಿಸಿಲ್ಲ. ಹಾಗೆಯೇ ಟ್ರಂಪ್ ಅವರು, ಅಮೆರಿಕದ ಉತ್ಪನ್ನಗಳನ್ನು ಖರೀದಿಸಲು 500 ಬಿಲಿಯನ್ ಡಾಲರ್ ಬದ್ಧತೆಯ ಬಗ್ಗೆ ಯಾವುದೇ ಉಲ್ಲೇಖವನ್ನು ನೀಡಿಲ್ಲ. 2024ರಲ್ಲಿ ಭಾರತಕ್ಕೆ ಅಮೆರಿಕ ಸರಕುಗಳ ರಫ್ತು ಕೇವಲ 41.5 ಬಿಲಿಯನ್ ಡಾಲರ್ ಆಗಿತ್ತು. ಅದನ್ನು 500 ಬಿಲಿಯನ್ ಡಾಲರ್‌ಗೆ ಹೆಚ್ಚಿಸಲು ದಶಕಗಳಲ್ಲದಿದ್ದರೂ ವರ್ಷಗಳೆ ಬೇಕಾಗುತ್ತದೆ.

ವ್ಯಾಪಾರ ಒಪ್ಪಂದದಿಂದ ಯಾರು ಹೆಚ್ಚು ಲಾಭ ಪಡೆದರು ಎಂಬುದು ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸಿದ ನಂತರವಷ್ಟೇ ಸ್ಪಷ್ಟನೆ ಸಿಗಲಿದೆ.

ಅಮೆರಿಕ ಸುಂಕ ಕಡಿತಗೊಳಿಸಿದ್ದೇಕೆ?

ಜಾಗತಿಕ ಮಟ್ಟದಲ್ಲಿ ಭಾರತ ಬೃಹತ್, ಕ್ರಿಯಾತ್ಮಕ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದೆ. ಟ್ರಂಪ್ ಅವರ ಸುಂಕ ಮತ್ತು ವ್ಯಾಪಾರ ಬೆದರಿಕೆಗಳಿಗೆ ಸುಲಭವಾಗಿ ಮಣಿಯುವುದಿಲ್ಲ. ಟ್ರಂಪ್ ಅವರಿಂದ ‘ಸತ್ತ ಆರ್ಥಿಕತೆ’ ಎಂದು ಹಣೆಪಟ್ಟಿ ಕಟ್ಟಲ್ಪಟ್ಟಿದ್ದರೂ, ಐರೋಷ್ಯ ಒಕ್ಕೂಟ (ಇಯು) ಮತ್ತು ಮೂರು ಪ್ರಮುಖ ದೇಶಗಳು ಭಾರತದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಧಾವಿಸಿದ್ದವು. ಇದು ಸಕಾರಾತ್ಮಕ ಮನೋಭಾವವನ್ನು ಸೃಷ್ಟಿಸಿತ್ತು. ಇದರಿಂದಾಗಿ ಅಮೆರಿಕಕ್ಕೆ ಹೋಲಿಸಿದರೆ ಭಾರತದ ವಿಶ್ವಾಸಾರ್ಹತೆ ಹೆಚ್ಚಾಗಿತ್ತು.

ಕಳೆದೊಂದು ವರ್ಷದಿಂದ ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ನನೆಗುದಿಗೆ ಬಿದ್ದಿದ್ದರೂ ಕೂಡ ಬ್ರಿಟನ್, ನ್ಯೂಜಿಲೆಂಡ್ ಮತ್ತು ಓಮನ್ ದೇಶಗಳು ಭಾರತದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡವು.

‘ಎಲ್ಲ ಒಪ್ಪಂದಗಳ ತಾಯಿ’ ಎಂದು ಬಣ್ಣಿಸಲಾಗಿರುವ ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಮಾತುಕತೆ ಈಚೆಗೆ ಪೂರ್ಣಗೊಂಡಿತ್ತು. ಇದರಿಂದಾಗಿ ಟ್ರಂಪ್ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಗಮನಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.