ADVERTISEMENT

ನ್ಯಾಷನಲ್ ಹೆರಾಲ್ಡ್‌ ಪ್ರಕರಣ | ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ: ಖರ್ಗೆ

ಪಿಟಿಐ
Published 20 ಏಪ್ರಿಲ್ 2025, 12:47 IST
Last Updated 20 ಏಪ್ರಿಲ್ 2025, 12:47 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ಪಿಟಿಐ

ಬಕ್ಸಾರ್(ಬಿಹಾರ): ‘ನ್ಯಾಷನಲ್‌ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಸಿಲುಕಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾಂಗ್ರೆಸ್‌ ಪಕ್ಷಕ್ಕೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ADVERTISEMENT

ಬಕ್ಸಾರ್‌ನ ದಾಲ್‌ಸಾಗರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಜೈ ಬಾಪು, ಜೈಭೀಮ್‌, ಜೈಸಂವಿಧಾನ’ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ನಾವು ಯಾರಿಗೂ ಹೆದರುವುದಿಲ್ಲ. ಯಾರ ಮುಂದೆಯೂ ತಲೆ ಬಾಗುವುದೂ ಇಲ್ಲ. ಪ್ರಕರಣ ಸಂಬಂಧ ಕೇಂದ್ರ ತನಿಖಾ ತಂಡವು ಶೋಧ ಕಾರ್ಯ ನಡೆಸಿದ್ದು, ಬರಿಗೈಯಲ್ಲಿ ತೆರಳಿದೆ. ನಮ್ಮ ನಾಯಕರು ಹೆದರುವ ಜಾಯಮಾನದವರಲ್ಲ. ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಅವರಂತಹ ನಾಯಕರು ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

‘ಸ್ವಾತಂತ್ರ್ಯ ಹೋರಾಟದ ಸಂದರ್ಭ ಬ್ರಿಟಿಷ್ ಆಡಳಿತದ ವಿರುದ್ಧ ಜನಸಾಮಾನ್ಯರ ಧ್ವನಿಯನ್ನು ಒಗ್ಗೂಡಿಸುವ ಸಲುವಾಗಿ ನ್ಯಾಷನಲ್‌ ಹೆರಾಲ್ಡ್ ಪತ್ರಿಕೆಯನ್ನು ಆರಂಭಿಸಲಾಯಿತು. ಆಗ ಆರ್‌ಎಸ್‌ಎಸ್‌ ನಾಯಕರೆಲ್ಲ ಬ್ರಿಟಿಷರ ಏಜೆಂಟರುಗಳಾಗಿದ್ದರು ಮತ್ತು ಅವರಿಗಾಗಿ ಕೆಲಸ ಮಾಡುತ್ತಿದ್ದರು. ಇದೀಗ ಪಕ್ಷದ ಬೆನ್ನುಲುಬಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಗುರಿ ಮಾಡಲಾಗುತ್ತಿದೆ. ವಿರೋಧ ಪಕ್ಷದ ನಾಯಕರುಗಳನ್ನು ಹೆದರಿಸಲು ಸಿಬಿಐ, ಇ.ಡಿ, ಐಟಿಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ವಕ್ಫ್‌ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿದ ಅವರು, ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಮಾಜದ ಒಳಿತಿನ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಲು ಮಾತ್ರ ಗೊತ್ತು. ವಕ್ಫ್‌ ಕಾಯ್ದೆಯು ಸಮುದಾಯಗಳ ನಡುವೆ ಒಡಕು ಮೂಡಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪಿತೂರಿಯಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.