ADVERTISEMENT

ಎನ್‌ಐಎ: ಸಚಿನ್ ವಾಜೆ ಸಹಚರ, ಪೊಲೀಸ್‌ ಅಧಿಕಾರಿ ರಿಯಾಜ್‌ ಬಂಧನ

ಏಜೆನ್ಸೀಸ್
Published 11 ಏಪ್ರಿಲ್ 2021, 8:42 IST
Last Updated 11 ಏಪ್ರಿಲ್ 2021, 8:42 IST
ಎನ್‌ಐಎ–ಪ್ರಾತಿನಿಧಿಕ ಚಿತ್ರ
ಎನ್‌ಐಎ–ಪ್ರಾತಿನಿಧಿಕ ಚಿತ್ರ   

ಮುಂಬೈ: ಮುಕೇಶ್ ಅಂಬಾನಿ ನಿವಾಸದ ಸಮೀಪ ಸ್ಪೋಟಕಗಳನ್ನು ತುಂಬಿದ ವಾಹನ ಪತ್ತೆ ಪ್ರಕರಣದಲ್ಲಿ ಮುಂಬೈನ ಪೊಲೀಸ್‌ ಅಧಿಕಾರಿ ರಿಯಾಜ್‌ ಖಾಜಿ ಅವರನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಭಾನುವಾರ ಬಂಧಿಸಿದೆ.

ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್‌ ವಾಜೆ ಅವರಿಗೆ ರಿಯಾಜ್‌ ಸಹಕಾರ ನೀಡಿದ್ದರು ಎಂದು ಎನ್‌ಐಎ ಹೇಳಿದೆ. ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಸಮೀಪ ಸ್ಪೋಟಕಗಳನ್ನು ತುಂಬಿದ ವಾಹನ ಪತ್ತೆ ಪ್ರಕರಣ ಮತ್ತು ಉದ್ಯಮಿ ಮನ್‌ಸುಖ್‌ ಹಿರೇನ್ ಸಾವಿನ ಪ್ರಕರಣದಲ್ಲಿ ಎನ್‌ಐಎ ಕಳೆದ ತಿಂಗಳು ಸಚಿನ್ ವಾಜೆ ಅವರನ್ನು ಬಂಧಿಸಿದೆ.

ಸಚಿನ್‌ ವಾಜೆ ರೀತಿಯೇ ರಿಯಾಜ್‌ ಸಹ ಅಸಿಸ್ಟೆಂಟ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿದ್ದಾರೆ. ಮಾರ್ಚ್‌ 5ರಂದು ಶವವಾಗಿ ಪತ್ತೆಯಾದ ಉದ್ಯಮಿ ಹಿರೇನ್‌ ಅವರ ಸ್ಕಾರ್ಪಿಯೊ ಕಾರನ್ನು ಸಚಿನ್‌ ವಾಜೆ ಬಾಂಬ್‌ ಬೆದರಿಕೆಗಾಗಿ ಬಳಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಸ್ಫೋಟಕಗಳಿದ್ದ ಕಾರು ಫೆಬ್ರುವರಿ 25ರಂದು ಮುಕೇಶ್‌ ಅಂಬಾನಿ ನಿವಾಸ ಆಂಟಿಲಿಯಾ ಮುಂಭಾಗದಲ್ಲಿ ಪತ್ತೆಯಾಗಿತ್ತು. ಆ ಪ್ರಕರಣಗಳಲ್ಲಿ ಸಚಿನ್‌ರನ್ನು ಮಾರ್ಚ್‌ 13ರಂದು ಎನ್‌ಐಎ ಬಂಧಿಸಿತ್ತು.

ADVERTISEMENT

ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಕಳೆದ ತಿಂಗಳು ಎರಡೂ ಪ್ರಕರಣಗಳನ್ನು ಎನ್‌ಐಎ ಮಹಾರಾಷ್ಟ್ರದ ಉಗ್ರ ನಿಗ್ರಹ ತಂಡದಿಂದ ತನಿಖೆಗೆ ಹಸ್ತಾಂತರಿಸಿಕೊಂಡಿದೆ. ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ ಬೀರ್‌ ಸಿಂಗ್‌, ಇಬ್ಬರು ಡೆಪ್ಯೂಟಿ ಕಮಿಷನರ್‌ಗಳು ಹಾಗೂ ಅಪರಾಧ ಗುಪ್ತಚರ ದಳ ಹತ್ತಾರು ಪೊಲೀಸರು ಸೇರಿದಂತೆ 40ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ಹಿರೇನ್ ಸಾವಿನ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಸಚಿನ್‌ ವಾಜೆ 2004ರಿಂದ 2007ರ ವರೆಗೂ ಅಮಾನತ್ತುಗೊಂಡಿದ್ದರು. ಅವರು 2007ರಲ್ಲಿ ಪೊಲೀಸ್‌ ಇಲಾಖೆ ತೊರೆದಿದ್ದರು. 2020ರಲ್ಲಿ ಅವರನ್ನು ಮತ್ತೆ ಪೊಲೀಸ್‌ ಇಲಾಖೆಗೆ ಸೇರಿಸಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.