ADVERTISEMENT

ಚನ್ನಿ ಅಳಿಯನ ಬಂಧನ: ಕಾಂಗ್ರೆಸ್ ಸಿಎಂ ಅಭ್ಯರ್ಥಿ ಆಯ್ಕೆ ಬಗ್ಗೆ ಸಿಧು ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2022, 6:59 IST
Last Updated 5 ಫೆಬ್ರುವರಿ 2022, 6:59 IST
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು (ಪಿಟಿಐ ಸಂಗ್ರಹ ಚಿತ್ರ)
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು (ಪಿಟಿಐ ಸಂಗ್ರಹ ಚಿತ್ರ)   

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಹುದ್ದೆಗೆ ಪ್ರಾಮಾಣಿಕ ಹಾಗೂ ಉತ್ತಮ ಹಿನ್ನೆಲೆಯುಳ್ಳವರನ್ನೇ ಕಾಂಗ್ರೆಸ್ ಆಯ್ಕೆ ಮಾಡಬೇಕು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಮರಳು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಸಿಧು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಡೆಯಲಿರುವ ವರ್ಚುವಲ್ ರ್‍ಯಾಲಿಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಅವರು ಮಾತನಾಡಲಿದ್ದು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆ ಇದೆ. ಸಂಭಾವ್ಯರ ಪೈಕಿ ಚನ್ನಿ ಮುಂಚೂಣಿಯಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ADVERTISEMENT

ಪಂಜಾಬ್‌ನಲ್ಲಿ ಫೆಬ್ರುವರಿ 20ರಂದು ಚುನಾವಣೆ ನಡೆಯಲಿದೆ.

ನೈತಿಕರಾಗಿಲ್ಲದ, ಅಪ್ರಾಮಾಣಿಕ, ಭ್ರಷ್ಟಾಚಾರ ಮತ್ತು ಕೆಲವು ಮಾಫಿಯಾ ನಂಟು ಹೊಂದಿರುವವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇ ಆದಲ್ಲಿ ಜನರು ಬದಲಾವಣೆಗಾಗಿ ಮತ ಚಲಾಯಿಸಬಹುದು, ಸೋಲಿಸಬಹುದು ಎಂದು ಸಿಧು ಹೇಳಿರುವುದಾಗಿ ‘ಎನ್‌ಡಿ ಟಿವಿ’ ವರದಿ ಮಾಡಿದೆ. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗೆ ಕನಿಷ್ಠ 60 ಶಾಸಕರ ಬೆಂಬಲವಾದರೂ ಇರಬೇಕು ಎಂದು ಅವರು ಹೇಳಿದ್ದಾರೆ.

‘ನಮಗೆ ಪ್ರಾಮಾಣಿಕ ಅಭ್ಯರ್ಥಿ ಬೇಕು. ನಮ್ಮ ಆಯ್ಕೆಯ ಮೇಲೆ ನಮ್ಮ ಹಣೆಬರಹ ನಿರ್ಧಾರಗೊಂಡಿದೆ. ಮಾಫಿಯಾ ನಂಟು ಹೊಂದಿರುವ ವ್ಯಕ್ತಿಯು ಯೋಜನೆಗಳನ್ನು ಜಾರಿ ಮಾಡಲಾರ. ಮಾಫಿಯಾ ನಂಟು ಹೊಂದಿರುವ ವ್ಯಕ್ತಿಯೇ ಮುಖ್ಯಮಂತ್ರಿಯಾದರೆ ಮಾಫಿಯಾವನ್ನು ಮಟ್ಟ ಹಾಕುವುದು ಯಾರು’ ಎಂದು ಸಿಧು ಪ್ರಶ್ನಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.