ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಗಾಯಗೊಂಡ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ
ನವದೆಹಲಿ: ‘ಸಂವಿಧಾನ ಶಿಲ್ಪಿ’ ಡಾ. ಬಿ.ಆರ್ ಅಂಬೇಡ್ಕರ್ ಕುರಿತು ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ‘ಇಂಡಿಯಾ’ ಬಣದ ಸಂಸದರು ನೀಲಿ ಬಣ್ಣದ ಬಟ್ಟೆ ಧರಿಸಿ ಇಂದು (ಗುರುವಾರ) ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಇನ್ನೊಂದೆಡೆ, ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಪ್ರತಿಪಕ್ಷ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತ, ಫಲಕಗಳನ್ನು ಹಿಡಿದು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸಂಸದರು ಸಂಸತ್ತಿನ ಆವರಣದೊಳಗೆ ಪ್ರತಿಭಟಿಸಿದರು.
'ಇಂಡಿಯಾ’ ಬಣದ ಸದಸ್ಯರು ಮೊದಲಿಗೆ ಸಂಸತ್ತಿನ ಆವರಣದಲ್ಲಿರುವ ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಯ ಬಳಿ ‘ಜೈ ಭೀಮ್’ ಮತ್ತು ‘ಅಮಿತ್ ಶಾ ಮಾಫಿ ಮಾಂಗೋ’ ಎಂಬ ಪೋಸ್ಟರ್‌ಗಳು ಹಾಗೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡೆಸುತ್ತಿದ್ದ ‘ಇಂಡಿಯಾ’ ಬಣ ಸಂಸದರು ಹಾಗೂ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಸಂಸದರು ಸಂಸತ್ತಿನ ಮಕರ ದ್ವಾರ ಬಳಿ ಮುಖಾಮುಖಿಯಾಗಿದ್ದು, ಸಂಸತ್ ಭವನದ ಆವರಣದಲ್ಲಿ ತಳ್ಳಾಟ ಮತ್ತು ನೂಕುನುಗ್ಗಲಿಗೆ ಕಾರಣವಾಯಿತು. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರು ಗಾಯಗೊಂಡಿದ್ದಾರೆ.
ಸಾರಂಗಿ ಅವರ ಹಣೆಯ ಮೇಲೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಳ್ಳಿದ್ದರಿಂದ ಗಾಯವಾಗಿದೆ ಎಂದು ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.