
ಅಮಿತ್ ಶಾ
ನವದೆಹಲಿ: ‘ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಪತ್ತೆ ಮಾಡಿ, ಗಡೀಪಾರು ಮಾಡುವುದು ಎನ್‌ಡಿಎ ಸರ್ಕಾರದ ನೀತಿಯಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಕುರಿತಾದ ಚರ್ಚೆ ವೇಳೆ ಮಾತನಾಡಿದ ಅವರು, ‘ದೇಶದಲ್ಲಿರುವ ಎಲ್ಲಾ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವುದಕ್ಕೆ ಬಯಸುತ್ತೇವೆ. ಪ್ರತಿಪಕ್ಷಗಳು ಕಲಾಪವನ್ನು ಬಹಿಷ್ಕರಿಸಬಹುದು. ಆದರೆ, ಯಾವುದೇ ಅಕ್ರಮ ವಲಸಿಗರು ಮತದಾರರ ಪಟ್ಟಿಯಲ್ಲಿ ಉಳಿಯದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ಮತದಾರರ ಪಟ್ಟಿಯಲ್ಲಿ ಅಕ್ರಮ ವಲಸಿಗರನ್ನು ಉಳಿಸಿಕೊಳ್ಳಲು ಪ್ರತಿಪಕ್ಷಗಳು ಎಸ್‌ಐಆರ್ ವಿಷಯ ಪ್ರಸ್ತಾಪಿಸಿವೆ’ ಎಂದು ಶಾ ವಾಗ್ದಾಳಿ ನಡೆಸಿದ್ದಾರೆ.
‘2014ರ ಮೇ ನಂತರ ಚುನಾವಣಾ ಸುಧಾರಣೆಗಳ ಕುರಿತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಯಾವುದೇ ಸಲಹೆಗಳನ್ನು ನೀಡಿಲ್ಲ’ ಎಂದೂ ಶಾ ಗುಡುಗಿದ್ದಾರೆ.
‘ಚುನಾವಣಾ ಆಯೋಗದೊಂದಿಗೆ ಶಾಮೀಲಾಗಿ ಮತ ಕಳವು ಮಾಡುವ ಮೂಲಕ ಬಿಜೆಪಿ ಅತಿದೊಡ್ಡ ರಾಷ್ಟ್ರವಿರೋಧಿ ಕೃತ್ಯದಲ್ಲಿ ತೊಡಗಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿದ ಶಾ, ‘ನೀವು ನಡೆಸಿದ ಮೂರು ಪತ್ರಿಕಾಗೋಷ್ಠಿಗಳ ಕುರಿತು ನಮ್ಮೊಂದಿಗೆ ಚರ್ಚೆಗೆ ಬರಲು ಸಿದ್ಧರಿದ್ದೀರಾ’ ಎಂದು ಸವಾಲು ಹಾಕಿದ್ದಾರೆ.
ಈ ವೇಳೆ ರಾಹುಲ್ ಗಾಂಧಿ ಮತ್ತು ಅಮಿತ್ ಶಾ ನಡುವೆ ವಾಗ್ವಾದವು ನಡೆಯಿತು.
ಚುನಾವಣಾ ಆಯುಕ್ತರು ಅಧಿಕಾರದಲ್ಲಿದ್ದಾಗ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಶಿಕ್ಷೆ ಇಲ್ಲ ಎಂಬ ಕಾನೂನಿನ ಬದಲಾವಣೆ ಕುರಿತು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ‘ಭಾರತದ ಇತಿಹಾಸದಲ್ಲಿ ಯಾವುದೇ ಪ್ರಧಾನಿ ಹೀಗೆ ಮಾಡಿಲ್ಲ. ಪ್ರಧಾನಿ ಮತ್ತು ಗೃಹ ಸಚಿವರು ಚುನಾವಣಾ ಆಯುಕ್ತರಿಗೆ ಈ ವಿನಾಯಿತಿಯ ಉಡುಗೊರೆಯನ್ನು ಏಕೆ ನೀಡುತ್ತಿದ್ದಾರೆ’ ಎಂದು ನಾನು ನಿನ್ನೆ ಒಂದು ಪ್ರಶ್ನೆ ಕೇಳಿದ್ದೆ. ಆದರೆ, ಮೋದಿ–ಶಾ ಇದರ ಬಗ್ಗೆ ಉತ್ತರ ನೀಡಿಲ್ಲ’ ಎಂದು ಟೀಕಿಸಿದ್ದಾರೆ.
ನನ್ನ ಪತ್ರಿಕಾಗೋಷ್ಠಿಗಳ ಕುರಿತು ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ. ನೀವು ಸಿದ್ಧವೇ ಎಂದು ರಾಹುಲ್, ಅಮಿತ್ ಶಾಗೆ ಪ್ರತಿ ಸವಾಲು ಹಾಕಿದ್ದಾರೆ.
‘ವಿರೋಧ ಪಕ್ಷದ ನಾಯಕನ ಇಚ್ಛೆಗೆ ಅನುಗುಣವಾಗಿ ನಾವು ಭಾಷಣವನ್ನು ರೂಪಿಸುವುದಿಲ್ಲ ಮತ್ತು ಬೇರೊಬ್ಬರ ಬೇಡಿಕೆಯ ಮೇರೆಗೆ ನಮ್ಮ ವಾದದ ಅನುಕ್ರಮವನ್ನು ಬದಲಾಯಿಸುವುದಿಲ್ಲ’ ಎಂದು ರಾಹುಲ್‌ಗೆ ಶಾ ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.