ಡೊನಾಲ್ಡ್ ಟ್ರಂಪ್ ಹಾಗೂ ಶಶಿ ತರೂರ್
ನವದೆಹಲಿ: ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರಂಭಿಕ ಹೇಳಿಕೆಗಳನ್ನು ಗಮನಿಸಿದರೆ ಅವರ ಅಧಿಕಾರಾವಧಿಯು ನೀರಸವಾಗಿರದು ಎಂದು ಅಂದಾಜಿಸಬಹುದು. ಜತೆಗೆ ಭಾರತ ಹಾಗೂ ಅಮೆರಿಕದ ಬಾಂಧವ್ಯ ಉತ್ತಮಗೊಳ್ಳುವ ನಿರೀಕ್ಷೆಯೂ ಇದೆ’ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಅಧಿಕಾರ ವಹಿಸಿಕೊಂಡ ನಂತರ ‘ಅಮೆರಿಕನ್ನರ ಪಾಲಿಗೆ ಇದು ಸುವರ್ಣ ಯುಗ’ ಎಂದು ಬಣ್ಣಿಸಿದ್ದಾರೆ.
78 ವರ್ಷದ ಟ್ರಂಪ್ ಅವರು ಮುಂದಿನ ನಾಲ್ಕು ವರ್ಷಗಳ ತಮ್ಮ ಅವಧಿಯ ಕುರಿತು ಮಾತನಾಡಿದ್ದಾರೆ. ‘ಅಮೆರಿಕದ ಕುಸಿತ ಅಂತ್ಯ ಕಂಡಿತು. ದೇಶವು ಬಹುಬೇಗ ಬದಲಾವಣೆ ಕಾಣಲಿದೆ’ ಎಂದು ರಾಷ್ಟ್ರವನ್ನುದ್ದೇಶಿಸಿ ಹೇಳಿದ್ದಾರೆ.
ಟ್ರಂಪ್ ಅವರ ಮಾತುಗಳ ಕುರಿತು ಪ್ರತಿಕ್ರಿಯಿಸಿರುವ ತರೂರ್, ‘ಭಾರತದ ವಿಷಯದಲ್ಲಿ ಅಮೆರಿಕದೊಂದಿಗಿನ ಸಂಬಂಧ ಉತ್ತಮವಾಗಿದೆ. ಟ್ರಂಪ್ ಅವರು ಈ ಹಿಂದೆ ಅಧ್ಯಕ್ಷರಾಗಿದ್ದ ಅವಧಿಯಲ್ಲೂ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಉತ್ತಮವಾಗಿತ್ತು. ಅದರಲ್ಲೂ ವ್ಯಾಪಾರ ಕ್ಷೇತ್ರದಲ್ಲಿ ಎರಡೂ ರಾಷ್ಟ್ರಗಳು ಪರಸ್ಪರ ಒಪ್ಪಂದ ಹೊಂದಿದ್ದವು’ ಎಂದು ನೆನಪಿಸಿಕೊಂಡಿದ್ದಾರೆ.
‘ಮಾಹಿತಿ ಪ್ರಕಾರ ಟ್ರಂಪ್ ಅವರು ಏಪ್ರಿಲ್ ಹೊತ್ತಿಗೆ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಅದು ಉತ್ತಮ ಬೆಳವಣಿಗೆ. ಆದರೆ ವ್ಯಾಪಾರ ಕ್ಷೇತ್ರದಲ್ಲಿ ಅಮೆರಿಕದ ವಸ್ತುಗಳ ಮೇಲಿನ ತೆರಿಗೆ ತಗ್ಗಿಸುವತ್ತ ಭಾರತ ಚಿಂತಿಸಬೇಕಿದೆ. ಇಲ್ಲವಾದಲ್ಲಿ, ಅಮೆರಿಕದಲ್ಲಿ ಮಾರಾಟವಾಗುವ ಭಾರತದ ವಸ್ತುಗಳ ಮೇಲೂ ತೆರಿಗೆ ವಿಧಿಸುವ ಅಪಾಯ ಇದ್ದೇ ಇದೆ. ಇದು ಮುಖ್ಯವೂ ಹೌದು, ತ್ವರಿತವಾಗಿ ಪರಿಗಣಿಸಬೇಕಾದ ಸಂಗತಿಯೂ ಹೌದು’ ಎಂದಿದ್ದಾರೆ.
‘ಭಾರತದಿಂದ ಬಹಳಷ್ಟು ಜನ ಕಾನೂನಾತ್ಮಕವಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದಾರೆ. ಆದರೆ ಇನ್ನೂ ಬಹಳಷ್ಟು ಜನ ಅಕ್ರಮವಾಗಿ ವಲಸೆ ಹೋದವರಿದ್ದಾರೆ. ಅವರನ್ನು ಟ್ರಂಪ್ ಸರ್ಕಾರ ಹೊರದಬ್ಬುವ ಅಪಾಯವಿದೆ’ ಎಂದು ತರೂರ್ ಹೇಳಿದ್ದಾರೆ.
ರೂಪಾಯಿ ಮೌಲ್ಯ ಕುಸಿತ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ತರೂರ್, ‘ರಫ್ತು ಪ್ರಮಾಣವನ್ನು ಭಾರತ ಹೆಚ್ಚಿಸಬೇಕಿದೆ. ಹೊಸ ದರವು ದೇಶದ ರಫ್ತಿನ ಮೇಲೆ ಪರಿಣಾಮ ಬೀರುವುದಾದರೆ, ರೂಪಾಯಿ ಅಪಮೌಲ್ಯವಾಗಲಿದೆ. ಇದೇ ಸಮಯದಲ್ಲಿ ರಫ್ತು ಹೆಚ್ಚಿಸದಿದ್ದರೆ ಅದು ಅವಸಾನವೇ ಸರಿ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.