ADVERTISEMENT

ಶಾಸಕರ ಕೊಲೆ ಪ್ರಕರಣ: ಮಾವೋವಾದಿ ನಾಯಕಿ ಭವಾನಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2021, 6:27 IST
Last Updated 12 ಜೂನ್ 2021, 6:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಶಾಸಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಸಿಪಿಐ (ಮಾವೋವಾದಿ)ಯ ಪ್ರದೇಶ ಸಮಿತಿ ಸದಸ್ಯೆ (ಎಸಿಎಂ) ಸಾಕೆ ಕಲಾವತಿ ಅಲಿಯಾಸ್ ಭವಾನಿ (45) ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದೆ.

2019 ಸೆಪ್ಟೆಂಬರ್‌ನಲ್ಲಿ ಪೂರ್ವ ಗೋದಾವರಿಯ ಹಳ್ಳಿಯಲ್ಲಿ ಗುಂಡೇಟು ಹೊಡೆದು ಭವಾನಿ ಅವರನ್ನು ಬಂಧಿಸಲಾಗಿತ್ತು. ಭವಾನಿ ಅವರು ಸಂಘಟನೆಯ ರಾಜ್ಯ ವಲಯ ಸಮಿತಿ ಸದಸ್ಯ ಕಾಕುರಿ ಪಾಂಡನ ಅಲಿಯಾಸ್ ಜಗನ್ ಅವರ ಪತ್ನಿ ಆಗಿದ್ದಾರೆ.

ಭವಾನಿ, ತೆಲುಗು ದೇಶಂ ಪಾರ್ಟಿ (ಟಿಡಿಪಿ) ಶಾಸಕ ಕಿಡಾರಿ ಸರ್ವೇಶ್ವರ ರಾವ್ ಮತ್ತು ಮಾಜಿ ಶಾಸಕ ಸಿವೇರಿ ಸೋಮಾ ಹತ್ಯೆಯ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ.

ADVERTISEMENT

2018 ಸೆಪ್ಟೆಂಬರ್ 23ರಂದು ದುಮ್ರಿಗುಡ ಮಂಡಲ್‌ ಲಿಪಿಟ್ಟುಪಟ್ಟು ಗ್ರಾಮದಲ್ಲಿ ಇಬ್ಬರು ನಾಯಕರನ್ನು ಮಾವೋವಾದಿ ಗುಂಪು ಹತ್ಯೆಗೈದಿತ್ತು.

ಪೊಲೀಸರ ಪ್ರಕಾರ, ಅರುಣಾ ನೇತೃತ್ವದ ಮಾವೋವಾದಿ ಗುಂಪು ನಾಯಕರನ್ನು ಕೊಲೆಗೈಯುವಲ್ಲಿ ಭವಾವಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಆರೋಪಿಸಲಾಗಿದೆ.

ಈ ಪ್ರಕರಣವನ್ನು ಮೂಲತಃ ವಿಶಾಖಪಟ್ಟಣದ ದುಮ್ರಿಗುಡ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಈ ಪ್ರಕರಣವನ್ನು ಎಎನ್‌ಐ, 2018 ಡಿಸೆಂಬರ್ 6ರಂದು ಮರು ನೋಂದಾಯಿಸಿ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ತನಿಖೆಯ ಬಳಿಕ ಒಂಬತ್ತು ಆರೋಪಿಗಳ ವಿರುದ್ದ ಎಎನ್‌ಐ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಭವಾನಿ 20 ವರ್ಷಗಳ ಹಿಂದೆ ನಿಷೇಧಿತ ಮಾವೋವಾದಿ ಸಂಘಟನೆಯನ್ನು ಸೇರಿಕೊಂಡಿದ್ದಳು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಕೊಲೆಗೂ 15 ದಿನಗಳ ಮೊದಲು ದುಮ್ರಿಗುಡದಲ್ಲಿ ಬೀಡುಬಿಟ್ಟಿದ್ದ ಪತಿ, ಸಹ ಆರೋಪಿಗಳು ಸೇರಿದಂತೆ 40 ಸದಸ್ಯರ ತಂಡದಲ್ಲಿ ಭವಾನಿ ಕೂಡಾ ಸೇರಿದ್ದಳು. ಆಕೆ ಐಎನ್‌ಎಸ್‌ಎಎಸ್ ರೈಫಲ್ ಹೊತ್ತೊಯ್ಯುತ್ತಿದ್ದಳು ಮತ್ತು ಕೊಲೆ ನಡೆಸಿದ ತಂಡಕ್ಕೆ ಶಸ್ತ್ರಾಸ್ತ್ರ ನೆರವನ್ನು ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.