ನಿತೀಶ್ ಕುಮಾರ್, ಸುಧಾಕರ ಸಿಂಗ್
ನವದಹೆಲಿ: ‘ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೈದ್ಯಕೀಯವಾಗಿ ಬದುಕಿದ್ದಾರೆ. ಆದರೆ ಬೌದ್ಧಿಕವಾಗಿ ಸತ್ತಿದ್ದಾರೆ. ಅವರನ್ನು ಬಿಹಾರದ ಜನರ ಮೇಲೆ ಹೇರುವುದೆಂದರೆ ರಾಜ್ಯಕ್ಕೆ ಅವಮಾನ ಮಾಡಿದಂತೆ’ ಎಂದು ರಾಷ್ಟ್ರೀಯ ಜನದಾ ದಳದ (RJD) ಸಂಸದ ಸುಧಾಕರ ಸಿಂಗ್ ಹೇಳಿದ್ದಾರೆ.
ಪಿಟಿಐಗೆ ಸಂದರ್ಶನ ನೀಡಿರುವ ಅವರು, ಮಹಾಘಟಬಂಧನ್ ಮೂರನೇ ಎರಡರಷ್ಟು ಬಹುಮತ ಪಡೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
‘ಪ್ರಸಕ್ತ ಚುನಾವಣೆ ಮತದಾನದಲ್ಲಿ ಪಾಲ್ಗೊಳ್ಳುವವರಿಗೆ ಆಧಾರ್ ಗುರುತಿನ ಚೀಟಿಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಬಡ ಸಮುದಾಯಕ್ಕೆ ಸಿಕ್ಕ ಜಯವಾಗಿದೆ. ಭಾರತದ ನಾಗರಿಕರು ಎನ್ನಲು ದಾಖಲೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದ್ದರಿಂದ ಅವರೆಲ್ಲರೂ ಮತದಾನದಿಂದ ಹೊರಗುಳಿಯುವ ಆತಂಕ ಎದುರಿಸಿದ್ದರು’ ಎಂದಿದ್ದಾರೆ.
‘ನಿತೀಶ್ ಕುಮಾರ್ ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಎನ್‌ಡಿಎ ಸರ್ಕಾರವು ವೈದ್ಯರನ್ನು ನೇಮಿಸಿ ಅವರ ವೈದ್ಯಕೀಯ ಪರೀಕ್ಷೆ ನಡೆಸಬೇಕು. ಬಿಹಾರದ 13 ಕೋಟಿ ಜನರು ಬೌದ್ಧಿಕವಾಗಿ ಸತ್ತಿರುವ ವ್ಯಕ್ತಿಯ ನಾಯಕತ್ವದಲ್ಲಿ ಬದುಕಬೇಕೇ’ ಎಂದು ಪ್ರಶ್ನಿಸಿದ್ದಾರೆ.
‘ನಿತೀಶ್ ಕುಮಾರ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅಧಿಕಾರಿಯಿಂದ ಹೂಕುಂಡ ಪಡೆದು, ನಂತರ ಅದನ್ನು ಅವರ ತಲೆ ಮೇಲೆ ಇಟ್ಟಿದ್ದರು. ಮತ್ತೊಂದು ವೇದಿಕೆ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಸಂದರ್ಭದಲ್ಲಿ ಅಸಂಬದ್ಧವಾಗಿ ವರ್ತಿಸಿದ್ದರು. ಹೀಗಾಗಿ ಜನರು ಮುಂದಿನ ತಲೆಮಾರಿನ ನಾಯಕ ತೇಜಸ್ವಿ ಯಾದವ್‌ಗೆ ಮತ ಹಾಕಲಿದ್ದಾರೆ. 2020ರ ಬಿಹಾರ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಮಹಾಘಟಬಂಧನವು ಎನ್‌ಡಿಎ ಅಭ್ಯರ್ಥಿಗಳು ಪಡೆದ ಮತಕ್ಕಿಂತ 12 ಸಾವಿರ ಹಿಂದಿದ್ದೆವು. ಒಂದು ಕ್ಷೇತ್ರದಲ್ಲಿ 12 ಮತಗಳಿಂದ ಪರಾಭವಗೊಂಡಿದ್ದವು. ಕೆಲವೆಡೆ 250ರಿಂದ 500 ಮತಗಳ ಅಂತದಿಂದ ಹಿಂದುಳಿದಿದ್ದೆವು’ ಎಂದು ಸುಧಾಕರ ಹೇಳಿದ್ದಾರೆ.
‘2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾರ್ಯಕ್ಷಮತೆ ಹೆಚ್ಚಾಯಿತು. ಆರ್‌ಜೆಡಿಯಿಂದ ಹಿಂದೆ ಒಬ್ಬ ಸಂಸದ ಇದ್ದರೆ, ಈಗ ಹತ್ತು ಸಂಸದರನ್ನು ಪಕ್ಷ ಹೊಂದಿದೆ.
‘ಬಿಹಾರದಲ್ಲಿ ನಡೆದ ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್) ನಂತರ ಚುನಾವಣಾ ಆಯೋಗವು ಯಾರೊಂದಿಗೂ ಮಾತುಕತೆಗೆ ಸಿದ್ಧವಿರಲಿಲ್ಲ. ಪಕ್ಷಗಳ ಅಹವಾಲನ್ನಾಗಲಿ ಅಥವಾ ಸುಪ್ರೀಂ ಕೋರ್ಟ್‌ನ ಸಲಹೆಯನ್ನಾಗಲಿ ಕೇಳುತ್ತಿರಲಿಲ್ಲ. ನಂತರ ಪರಿಷ್ಕರಣೆಯ ಪ್ರಕ್ರಿಯೆಯನ್ನು ವಿವರಿಸುವಂತೆ ಸುಪ್ರೀಂ ಕೋರ್ಟ್ ಆಯೋಗಕ್ಕೆ ಸೂಚಿಸಿತು. ಸಾರ್ವಜನಿಕರಿಗಾಗಲೀ ಅಥವಾ ಸುಪ್ರೀಂ ಕೋರ್ಟ್‌ಗಾಗಲೀ ಯಾವುದೇ ದಾಖಲೆ ತೋರಿಸುವ ಅಗತ್ಯವಿಲ್ಲ ಎಂದಿತ್ತು. ನಂತರ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶವು ಅನಕ್ಷರಸ್ಥ ಮತ್ತು ಜಮೀನು ಇಲ್ಲದ ಸುಮಾರು ಶೇ 25ರಷ್ಟು ಜನರಿಗೆ ನೆರವಾಗಿದೆ’ ಎಂದಿದ್ದಾರೆ.
‘ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ಬಹಳಷ್ಟು ಜನರ ಹೆಸರುಗಳು ಮತದಾರರ ಪಟ್ಟಿಯಲ್ಲಿದೆ ಎಂದು ಬೂತ್ ಮಟ್ಟದ ಅಧಿಕಾರಿಗಳು ಹೇಳಿದ್ದಾರೆ ಎಂದು ಆಯೋಗ ಹೇಳಿದೆ. ಯಂತ್ರ ಓದುವ ಮತದಾರರ ಪಟ್ಟಿಯನ್ನು ಆಯೋಗವು ಪಕ್ಷಗಳಿಗೆ ನೀಡಿಲ್ಲ. ಡಾಟಾ ಎಡಿಟ್ ಮಾಡಬಹುದಾದ ಸ್ವರೂಪದಲ್ಲಿದ್ದರೆ ಪಕ್ಷಗಳಿಂದ ಬದಲಾವಣೆ ಸಾಧ್ಯ ಎಂದು ಆಯೋಗ ಪ್ರತಿಪಾದಿಸಿದೆ. ಪಕ್ಷಗಳು ಏನೇ ಬದಲಾವಣೆ ಮಾಡಿದರೂ, ಮೂಲ ದಾಖಲೆ ಆಯೋಗದ ಬಳಿಯೇ ಇರುವುದರಿಂದ ಅವರು ಅದನ್ನು ಹೋಲಿಕೆ ಮಾಡಬಹುದು’ ಎಂದು ಸುಧಾಕರ ಹೇಳಿದ್ದಾರೆ.
ಅತಿ ಶೀಘ್ರದಲ್ಲಿ ‘ಮತಾಧಿಕಾರ ಯಾತ್ರೆ’ಯ ಎರಡನೇ ಚರಣ ಆರಂಭವಾಗಲಿದೆ. ಅದು ಬಿಹಾರದ ಉಳಿದ ಜಿಲ್ಲೆಗಳಲ್ಲಿ ಸಾಗಲಿದೆ. ಮೊದಲ ಚರಣದಲ್ಲಿ 18 ಜಿಲ್ಲೆಗಳಲ್ಲಿ ಈ ಯಾತ್ರೆ ಸಾಗಿತ್ತು. ತೇಜಸ್ವಿ ಯಾದವ್ ಅವರ ನಾಯಕತ್ವದಲ್ಲಿ ಈ ಯಾತ್ರೆ ನಡೆಯಲಿದೆ. ಇದ್ಕಕಾಗಿ ದೊಡ್ಡ ಸಂಖ್ಯೆಯಲ್ಲಿ ಸಂಘಟನೆ ನಡೆದಿದೆ’ ಎಂದಿದ್ದಾರೆ.
ದೇಶದಲ್ಲಿ ನುಸುಳುಕೋರರು ಇದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಧಾಕರ, ‘ಸಾಂವಿಧಾನಿಕ ಹುದ್ದೆಗಳಲ್ಲಿ ಅತಿ ಎತ್ತರದಲ್ಲಿ ಕೂತಿರುವ ವ್ಯಕ್ತಿಯಿಂದ ರಾಜಕೀಯ ಆರೋಪ ದಿಗ್ಭ್ರಮೆ ಮೂಡಿಸುತ್ತದೆ. ನುಸುಳುಕೋರರನ್ನು ದೇಶದಿಂದ ಇವರು ಹೊರದಬ್ಬಿದ್ದಾರೆ ಎಂದೇ ನಾವೆಲ್ಲರೂ ಭಾವಿಸಿದ್ದೆವು. ಆದರೆ ಕೆಂಪುಕೋಟೆಯಲ್ಲಿ ನಿಂತು ಇಂಥ ಆರೋಪ ಮಾಡುತ್ತಿರುವುದನ್ನು ಕೇಳಿದರೆ, ಅವರು ತಮ್ಮ ಕೈಯಲ್ಲಾಗದ್ದನ್ನು ಒಪ್ಪಿಕೊಂಡಿದ್ದಾರೆ ಎಂದರ್ಥ’ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.