ADVERTISEMENT

ವಿಪಕ್ಷಗಳ ಒಕ್ಕೂಟಕ್ಕೆ 'ಇಂಡಿಯಾ' ಹೆಸರಿಡಲು ನಿತೀಶ್ ಕುಮಾರ್ ಹಿಂದೇಟು; ಯಾಕೆ ಗೊತ್ತೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2023, 6:07 IST
Last Updated 19 ಜುಲೈ 2023, 6:07 IST
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಹಾರ ಸಿಎಂ ನಿತೀಶ್ ಕುಮಾರ್, ಡಿಸಿಎಂ ತೇಜಸ್ವಿ ಯಾದವ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಹಾರ ಸಿಎಂ ನಿತೀಶ್ ಕುಮಾರ್, ಡಿಸಿಎಂ ತೇಜಸ್ವಿ ಯಾದವ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ    –ಪಿಟಿಐ ಚಿತ್ರ

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿರೋಧಪಕ್ಷಗಳ ಮೈತ್ರಿಕೂಟಕ್ಕೆ ‘I.N.D.I.A’ (ಇಂಡಿಯಾ) ಎಂದು ಹೆಸರಿಡುವ ಬಗ್ಗೆ ಹಿಂದೇಟು ಹಾಕಿದ್ದಾರೆ. ಇದಕ್ಕೆ ಕಾರಣ I.N.D.I.A ಪದದಲ್ಲೂ ‘ಎನ್‌ಡಿಎ’ ಎಂಬ ಅಕ್ಷರಗಳಿವೆ ಎಂಬುದಾಗಿದೆ.

ಬೆಂಗಳೂರಿನಲ್ಲಿ ಮಂಗಳವಾರ ನಡೆದ ವಿರೋಧಪಕ್ಷಗಳ ಸಭೆಯಲ್ಲಿ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂದು ಹೆಸರಿಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಜತೆಗೆ ಹೆಸರು ಸೂಚಿಸುವ ಸಂಬಂಧ ಎಲ್ಲಾ ನಾಯಕರಿಂದ ಸಲಹೆಗಳನ್ನು ಕೇಳಲಾಗಿತ್ತು. ಬಳಿಕ ಅಂತಿಮವಾಗಿ ಇಂಡಿಯಾ ಎಂದೇ ಹೆಸರಿಡಲು ನಿರ್ಣಯಕ್ಕೆ ಬರಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಒಲ್ಲದ ಮನಸ್ಸಿನಿಂದ ನಿತೀಶ್ ಕುಮಾರ್ ‘ಇಂಡಿಯಾ’ ಹೆಸರಿಗೆ ಒಪ್ಪಿಗೆ ಸೂಚಿಸಿದ್ದಾರೆ. ‘ನೀವೆಲ್ಲರೂ ‘ಇಂಡಿಯಾ’ ಹೆಸರೇ ಸೂಕ್ತ ಎನ್ನುವುದಾದರೆ ಆದೇ ಇರಲಿ ಬಿಡಿ’ ಎಂದು ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ADVERTISEMENT

26 ಪಕ್ಷಗಳ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಿಪಕ್ಷಗಳ ಒಕ್ಕೂಟಕ್ಕೆ ‘ಇಂಡಿಯಾ’ ಎಂಬ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿದರು. ಈ ಪದದ ಪರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಲವಾದ ವಕಾಲತ್ತು ವಹಿಸಿ ಮಾತನಾಡಿದ್ದಾರೆ. ಸುದೀರ್ಘ ಚರ್ಚೆಯ ನಂತರ ಎಲ್ಲರೂ ಇದಕ್ಕೆ ಒಮ್ಮತ ಸೂಚಿಸಿದ್ದಾರೆ. ‘ಮೋದಿಯವರು ಇಂಡಿಯಾವನ್ನು ಹೇಗೆ ವಿರೋಧಿಸುತ್ತಾರೆ. ಎನ್‌ಡಿಎಯನ್ನು ವಿರೋಧಿಸುವವರು ಐಎನ್‌ಡಿಐಎ ಜೊತೆಗಿದ್ದಾರೆ’ ಎಂದು ರಾಹುಲ್ ಸಮರ್ಥಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮಣಿಸಲು ತಂತ್ರ ಹೆಣೆಯುತ್ತಿರುವ 26 ವಿರೋಧ ಪಕ್ಷಗಳು ಒಗ್ಗೂಡಿ ‘ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ’ (ಇಂಡಿಯನ್‌ ನ್ಯಾಷನಲ್‌ ಡೆವಲಪ್‌ಮೆಂಟಲ್‌ ಇನ್‌ಕ್ಲೂಸಿವ್‌ ಅಲಯನ್ಸ್– ‘ಇಂಡಿಯಾ’‌) ರಚಿಸಿಕೊಂಡಿದ್ದು, ಚುನಾವಣಾ ರಾಜಕೀಯದತ್ತ ಒಂದು ಹೆಜ್ಜೆ ಮುಂದಿಟ್ಟಿವೆ.

ಮೈತ್ರಿಕೂಟದ ಮುಂದಿನ ಸಭೆಯನ್ನು ಶೀಘ್ರದಲ್ಲಿ ಮುಂಬೈಯಲ್ಲಿ ನಡೆಸಿ, 11 ಸದಸ್ಯರ ಸಮನ್ವಯ ಸಮಿತಿ ರಚಿಸಲು ಸಭೆಯಲ್ಲಿ ಪಾಲ್ಗೊಂಡ ನಾಯಕರು ತೀರ್ಮಾನಿಸಿದ್ದಾರೆ.

ಶಕ್ತಿ ಪ್ರದರ್ಶಿಸಿದ ಮೋದಿ ಬಳಗ

ಎನ್‌ಡಿಎ ಮೈತ್ರಿಕೂಟದ 38 ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ದೆಹಲಿಯಲ್ಲಿ ಮಂಗಳವಾರ ‘ಶಕ್ತಿ ಪ್ರದರ್ಶನ’ದ ಸಭೆ ನಡೆಸಿ ವಿಪಕ್ಷಗಳ ‘ಮಹಾ ಮೈತ್ರಿಕೂಟ’ಕ್ಕೆ ಸೆಡ್ಡು ಹೊಡೆದಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ಅಜಿತ್‌ ಪವಾರ್‌, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಇ.ಪಳನಿಸ್ವಾಮಿ, ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ, ಮೈತ್ರಿಕೂಟದ ಮುಖಂಡರಾದ ಚಿರಾಗ್‌ ಪಾಸ್ವಾನ್‌, ಉಪೇಂದ್ರ ಸಿಂಗ್‌ ಕುಶ್ವಾಹ್‌, ಓಂ ಪ್ರಕಾಶ್‌ ರಾಜ್‌ಭರ್‌ ಮತ್ತಿತರರು ಸಭೆಯಲ್ಲಿ ಭಾಗಿಯಾದರು.

ಇವನ್ನೂ ಓದಿ...

INDIA ಒಕ್ಕೂಟದ ವಿರುದ್ಧ ಶಕ್ತಿ ಪ್ರದರ್ಶಿಸಿದ ಮೋದಿ ಬಳಗ

ಎನ್‌ಡಿಎ ಮಣಿಸಲು ‘ಇಂಡಿಯಾ’ ಅಣಿ: ಬಿಜೆಪಿಯೇತರ 26 ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ

ಇದು ಢೋಂಗಿ ಬಾಬಾ –38 ಕಳ್ಳರ ಗುಂಪು: ಎನ್‌ಡಿಎ ಮೈತ್ರಿಕೂಟದ ಬಗ್ಗೆ ಎಎಪಿ ವ್ಯಂಗ್ಯ

Explainer: ವಿರೋಧ ಪಕ್ಷಗಳ ಒಕ್ಕೂಟಕ್ಕೆ I.N.D.I.A ಹೆಸರು ಬಂದಿದ್ದು ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.