ADVERTISEMENT

ಜಾರ್ಖಂಡ್ ಮಾಜಿ ಸಿಎಂ ಬಂಧನ ಪ್ರಕರಣದಲ್ಲಿ ರಾಜಭವನದ ಕೈವಾಡವಿಲ್ಲ: ರಾಜ್ಯಪಾಲ

ಪಿಟಿಐ
Published 8 ಫೆಬ್ರುವರಿ 2024, 10:24 IST
Last Updated 8 ಫೆಬ್ರುವರಿ 2024, 10:24 IST
<div class="paragraphs"><p>ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌</p></div>

ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌

   

ರಾಂಚಿ: ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರನ್ನು ಬಂಧಿಸುವುದರ ಹಿಂದೆ ರಾಜಭವನದ ಕೈವಾಡ ಇದೆ ಎಂಬ ಆರೋಪವನ್ನು ಜಾರ್ಖಂಡ್‌ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್‌ ಅಲ್ಲಗಳೆದಿದ್ದಾರೆ.

‘ನಾವು ಪ್ರತಿ ಪ್ರಜಾಸತ್ತಾತ್ಮಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಹೀಗಾಗಿ ರಾಜಭವನದ ದುರ್ಬಳಕೆಯ ಪ್ರಶ್ನೆಯೇ ಬರುವುದಿಲ್ಲ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಏಳು ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದ ಬಳಿಕ ಹೇಮಂತ್‌ ಸೊರೇನ್‌ ಅವರನ್ನು ಇ.ಡಿ ಬಂಧಿಸಿತ್ತು. ಬಂಧನಕ್ಕೂ ಮುನ್ನ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

‘ರಾಜಭವನವು ಹೇಮಂತ್‌ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿರಲಿಲ್ಲ. ಬದಲಿಗೆ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿಸಿದ್ದು ಮುಖ್ಯಮಂತ್ರಿ ಕಚೇರಿ’ ಎಂದು ರಾಜ್ಯಪಾಲರು ತಿಳಿಸಿದರು.

‘ನನ್ನ ಬಂಧನದ ಹಿಂದೆ ಕೇಂದ್ರ ಮತ್ತು ರಾಜಭವನದ ಸಂಚು ಇದೆ’ ಎಂದು ಹೇಮಂತ್‌ ಸೊರೇನ್‌ ಅವರು ಫೆ. 5ರಂದು ಆರೋಪಿಸಿದ್ದರು. ಅದೇ ದಿನ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರು ಫೆ. 5ರಂದು ವಿಧಾನಸಭೆಯಲ್ಲಿ ವಿಶ್ವಾಸಮಾತ ಸಾಬೀತು ಮಾಡಿದ್ದರು.

ಚಂಪೈ ಸೊರೇನ್‌ ಅವರಿಗೆ ಸರ್ಕಾರ ರಚಿಸಲು ತಡವಾಗಿ ಆಹ್ವಾನ ಬಂದಿದ್ದರ ಕುರಿತು ಪ್ರತಿಕ್ರಿಯಿಸಿದ ರಾಜ್ಯಪಾಲರು, ‘ಈ ಪರಿಸ್ಥಿತಿಯಲ್ಲಿ ಕಾನೂನು ಸಲಹೆ ಪಡೆಯಬೇಕಿದ್ದರಿಂದ ವಿಳಂಬವಾಗಿದೆ. ಅಲ್ಲದೆ ನಾವು 26 ಗಂಟೆಗಳ ನಂತರ ಅವರನ್ನು ಆಹ್ವಾನಿಸಿದ್ದೇವೆ’ ಎಂದರು.

ಸಂಸದ ಸಾಹುಗೆ ಸಮನ್ಸ್‌

ಹೇಮಂತ್‌ ಅವರನ್ನು ಬಂಧಿಸಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್‌ನ ಕಾಂಗ್ರೆಸ್‌ ಮುಖಂಡ, ರಾಜ್ಯಸಭಾ ಸದಸ್ಯ ಧೀರಜ್‌ ಪ್ರಸಾದ್‌ ಸಾಹು ಅವರನ್ನು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ತಿಳಿಸಿದೆ. ರಾಂಚಿಯಲ್ಲಿರುವ ಇ.ಡಿ ಕಚೇರಿಗೆ ಇದೇ 10ರಂದು ಹಾಜರಾಗುವಂತೆ ಸಂಸದರಿಗೆ ನೀಡಿರುವ ಸಮನ್ಸ್‌ನಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಡಿಶಾ ಮೂಲದ ಬೌದ್‌ ಡಿಸ್ಟಿಲರಿ ಪ್ರೈವೇಟ್‌ ಲಿಮಿಟೆಡ್‌ ಮೇಲೆ ನಡೆದ ದಾಳಿ ವೇಳೆ ಆದಾಯ ತೆರಿಗೆ ಇಲಾಖೆಯು ₹ 351.8 ಕೋಟಿ ವಶಪಡಿಸಿಕೊಂಡಿತ್ತು. ಇದು ಸಾಹು ಅವರ ಕುಟುಂಬದ ಒಡೆತನದ ಕಂಪನಿ.

‘ಹೇಮಂತ್ ಅವರೊಂದಿಗೆ ಸಂಬಂಧ ಹಾಗೂ ಹೇಮಂತ್‌ ಅವರ ಮನೆ ಆವರಣದಲ್ಲಿ ವಶಪಡಿಸಿಕೊಂಡಿರುವ ಬಿಎಂಡಬ್ಲ್ಯು ಎಸ್‌ಯುವಿ ಕುರಿತು ಸಾಹು ಅವರನ್ನು ಇ.ಡಿ ಪ್ರಶ್ನಿಸಬಹುದು’ ಎಂದು ಮೂಲಗಳು ಹೇಳಿವೆ. ಈ ಎಸ್‌ಯುವಿ ಸಾಹು ಅವರ ‘ಬೇನಾಮಿ’ ಆಸ್ತಿಯಾಗಿರಬಹುದು ಎಂದು ಇ.ಡಿ ಶಂಕಿಸದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.