ADVERTISEMENT

ಆಪರೇಷನ್‌ ಬ್ಲೂ ಸ್ಟಾರ್‌ ಮಾಡಿ, ಇಂದಿರಾ ಬೆಲೆ ತೆತ್ತರು: ಚಿದಂಬರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2025, 9:33 IST
Last Updated 12 ಅಕ್ಟೋಬರ್ 2025, 9:33 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ‘ಆಪರೇಷನ್‌ ಬ್ಲೂ ಸ್ಟಾರ್‌’ ಕಾರ್ಯಾಚರಣೆಯನ್ನು ಕೈಗೊಳ್ಳುವ ನಿರ್ಧಾರ ಮಾಡಿದ್ದು ತಪ್ಪು. ಇಂದಿರಾ ಗಾಂಧಿ ಅವರು ಇಂಥ ತಪ್ಪು ನಿರ್ಧಾರ ತೆಗೆದುಕೊಂಡದಕ್ಕೆ ಪ್ರಾಣ ಕಳೆದುಕೊಂಡು ಬೆಲೆ ತೆತ್ತರು’ ಎಂದು ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಅವರು ಅಭಿಪ್ರಾಯಪಟ್ಟರು.

ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ನಡೆದ ‘ಕುಶ್ವಂತ್‌ ಸಿಂಗ್‌ ಸಾಹಿತ್ಯ ಹಬ್ಬ’ದಲ್ಲಿ ಪತ್ರಕರ್ತೆ ಹರಿಂದರ್‌ ಬವೇಜಾ ಅವರ ಜೀವನಚರಿತ್ರೆ ‘ದೇ ವಿಲ್‌ ಶೂಟ್‌ ಯು ಮೇಡಮ್‌: ಮೈ ಲೈಫ್‌ ಥ್ರೂ ಕಾನ್‌ಫ್ಲಿಕ್ಟ್‌’ ಪುಸ್ತಕದ ಕುರಿತು ಶನಿವಾರ ನಡೆದ ಸಂವಾದದಲ್ಲಿ ಚಿದಂಬರಂ ಮಾತನಾಡಿದರು. ಬವೇಜಾ ಅವರು ಸಂವಾದವನ್ನು ನಿರ್ವಹಿಸಿದ್ದರು.

‘ಈ ತಪ್ಪು ನಿರ್ಧಾರವನ್ನು ಇಂದಿರಾ ಗಾಂಧಿ ಅವರು ಮಾತ್ರವೇ ತೆಗೆದುಕೊಂಡಿದ್ದಲ್ಲ. ಇದರಲ್ಲಿ ಸೇನೆ, ಗುಪ್ತಚರ ಇಲಾಖೆ, ಪೊಲೀಸರ ಪಾತ್ರವೂ ಇತ್ತು. ಆದ್ದರಿಂದ ಇಂದಿರಾ ಅವರನ್ನು ಮಾತ್ರವೇ ದೂಷಿಸುವಂತಿಲ್ಲ. ಸ್ವರ್ಣ ಮಂದಿರದ ಒಳಗಿದ್ದ ಭಯೋತ್ಪಾದಕರನ್ನು ಹೊರಗೆಳೆದು ತರಲು ಮತ್ತು ಅವರನ್ನು ಬಂಧಿಸಲು ಬೇರೆ ವಿಧಾನಗಳಿದ್ದವು’ ಎಂದರು.

ADVERTISEMENT

ಬ್ಲೂ ಸ್ಟಾರ್‌ ಕಾರ್ಯಾಚರಣೆಯಾದ ಎರಡು ಮೂರು ವರ್ಷಗಳ ಬಳಿಕ ‘ಆಪರೇಷನ್‌ ಬ್ಲಾಕ್‌ ಥಂಡರ್‌’ ಅನ್ನು ಕೈಗೊಳ್ಳಲಾಯಿತು. ಈ ಕಾರ್ಯಾಚರಣೆಯಲ್ಲಿ ಸೇನೆಯನ್ನು ಹೊರಗಿಡಲಾಯಿತು. ಈ ಕಾರ್ಯಾಚರಣೆಯೇ ಸರಿಯಾದ ನಿರ್ಧಾರವಾಗಿತ್ತು’ ಎಂದರು.

ಬವೇಜಾ ಅವರು ಪ್ರತಿಕ್ರಿಯಿಸಿ, ‘ಪಂಜಾಬ್‌ನಲ್ಲಿ ಹಿಂಸೆಯ ಮತ್ತೊಂದು ಅಧ್ಯಾಯ ಆರಂಭವಾಗುವುದಕ್ಕೆ ಆಪರೇಷನ್‌ ಬ್ಲೂ ಸ್ಟಾರ್‌ ಕಾರಣ. ಇಂದಿರಾ ಅವರು ರಾಜಕಾರಣದಲ್ಲಿ ಧರ್ಮವನ್ನು ಲೇಪ ಮಾಡಿದರು. ಭಿಂದ್ರನ್‌ವಾಲೆಯನ್ನು ಬಳಸಿಕೊಂಡು ಅಕಾಲಿ ದಳದವರನ್ನು ನಿಯಂತ್ರಿಸಲು ಯತ್ನಿಸಿದ್ದರು. ಇದೊಂದು ಅತ್ಯಂತ ಕೆಟ್ಟ ನಿರ್ಧಾರವಾಗಿತ್ತು’ ಎಂದರು.

ಇದಕ್ಕೆ ಚಿದಂಬರಂ ಅವರು ಆಕ್ಷೇಪ ವ್ಯಕ್ತಪಡಿಸಿ, ‘ಭಿಂದ್ರನ್‌ವಾಲೆಯನ್ನು ಸೃಷ್ಟಿಸಿದ್ದು ಇಂದಿರಾ ಗಾಂಧಿ ಅವರಲ್ಲ. ಇಂಥ ಆರೋಪ ಮಾಡುವುದು ಸರಿ ಎಂದು ನನಗೆ ಅನ್ನಿಸುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.