ನಾಗರಿಕರ ರಕ್ಷಣೆ ಕುರಿತು ಅಣಕು ಪ್ರದರ್ಶನ
(ಪಿಟಿಐ ಚಿತ್ರ)
ನವದೆಹಲಿ: ಹರಿಯಾಣ, ರಾಜಸ್ಥಾನ, ಪಂಜಾಬ್ ಹಾಗೂ ಚಂಡೀಗಡದಲ್ಲಿ ಇಂದು (ಗುರುವಾರ) ನಡೆಸಲು ಉದ್ದೇಶಿಸಲಾಗಿದ್ದ ನಾಗರಿಕರ ರಕ್ಷಣೆ ಕುರಿತು ಅಣಕು ಪ್ರದರ್ಶನವನ್ನು ಮುಂದೂಡಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಗುರುವಾರ ನಿಗದಿಯಾಗಿದ್ದ 'ಆಪರೇಷನ್ ಶೀಲ್ಡ್' ನಾಗರಿಕರ ರಕ್ಷಣೆ ಅಣಕು ಪ್ರದರ್ಶನ ಮುಂದೂಡಲಾಗಿದೆ ಎಂದು ಹರಿಯಾಣ ಸರ್ಕಾರ ತಿಳಿಸಿದೆ.
ಕೇಂದ್ರಾಡಳಿತ ಪ್ರದೇಶ ಚಂಡೀಗಡದ ಆಡಳಿತವು ಸಹ ನಾಗರಿಕರ ರಕ್ಷಣೆ ಅಣಕು ಪ್ರದರ್ಶನ ಮುಂದೂಡುವುದಾಗಿ ಹೇಳಿದೆ.
ಈ ಮೊದಲು ಪಾಕ್‌ಗೆ ಹೊಂದಿಕೊಂಡಿರುವ ಪಶ್ಚಿಮದ ಗಡಿ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ಪರಿಶೀಲಿಸಲು ಮೇ 29ರಂದು ಮಾಕ್ ಡ್ರಿಲ್ ಹಾಗೂ ಬ್ಲ್ಯಾಕ್ ಔಟ್ ಆಯೋಜಿಸಲು ನಿರ್ಧರಿಸಲಾಗಿತ್ತು.
ಈ ಮಧ್ಯೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಪಂಜಾಬ್, ಜೂನ್ 3ರಂದು ನಾಗರಿಕರ ರಕ್ಷಣೆ ಅಣಕು ಪ್ರದರ್ಶನ ನಡೆಸಲು ಪ್ರಸ್ತಾವನೆಯನ್ನು ಸಲ್ಲಿಸಿದೆ.
'ನಮ್ಮ ಮನವಿಗೆ ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸಿದೆ' ಎಂದು ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚಿಗೆ ಪಾಕಿಸ್ತಾನ ವಿರುದ್ಧದ ಸಂಘರ್ಷದ ವೇಳೆ ಎಲ್ಲ ರಾಜ್ಯಗಳಲ್ಲಿ ನಾಗರಿಕರ ರಕ್ಷಣಾ ಅಣಕು ಪ್ರದರ್ಶನ ಆಯೋಜಿಸಲಾಗಿತ್ತು. ಯುದ್ಧದ ಸಂದರ್ಭದಲ್ಲಿ ದೇಶದ ಉತ್ತರ ಭಾಗದ ರಾಜ್ಯಗಳಲ್ಲಿ ಸಂಪೂರ್ಣ ಬ್ಲ್ಯಾಕ್ ಔಟ್ ಘೋಷಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.