ADVERTISEMENT

ಪಹಲ್ಗಾಮ್ ದಾಳಿ ಖಂಡಿಸಿದರೂ ಪಾಕಿಸ್ತಾನವನ್ನು ಟೀಕಿಸದ ಕ್ವಾಡ್ ಹೇಳಿಕೆಗೆ ಭಾರತ ಸಹಿ

ಅನಿರ್ಬನ್ ಭೌಮಿಕ್
Published 3 ಜುಲೈ 2025, 6:52 IST
Last Updated 3 ಜುಲೈ 2025, 6:52 IST
   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22ರಂದು ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದರೂ, ಪಾಕಿಸ್ತಾನವನ್ನು ಟೀಕಿಸದಿರುವ 'ಕ್ವಾಡ್‌' ನಾಯಕರ ಜಂಟಿ ಹೇಳಿಕೆಗೆ ಭಾರತ ಸಹಿ ಮಾಡಿದೆ.

ಕ್ವಾಡ್‌ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯು, ಪಹಲ್ಗಾಮ್‌ ಹತ್ಯಾಕಾಂಡವನ್ನು 'ಕಟು ಶಬ್ದಗಳಿಂದ' ಖಂಡಿಸಿದರೂ, ಉಗ್ರರು ಪಾಕಿಸ್ತಾನದೊಂದಿಗೆ ಹೊಂದಿರುವ ನಂಟು ಮತ್ತು ದಾಳಿ ನಡೆದ ಸ್ಥಳವು ಭಾರತದ ಭೂಪ್ರದೇಶದಲ್ಲಿದೆ ಎಂಬುದನ್ನು ಉಲ್ಲೇಖಿಸದ ಜಂಟಿ ಹೇಳಿಕೆ ಬಿಡುಗಡೆಯಾಗುವುದರೊಂದಿಗೆ ಮುಕ್ತಾಯವಾಗಿದೆ.

ಕ್ವಾಡ್‌ ಎಂಬುದು, ಇಂಡೋ–ಪೆಸಿಫಿಕ್‌ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾದ ವಿಸ್ತರಣಾವಾಧಿ ಧೋರಣೆಯನ್ನು ಎದುರಿಸುವ ನಿಟ್ಟಿನಲ್ಲಿ ಭಾರತ, ಆಸ್ಟ್ರೇಲಿಯಾ, ಜಪಾನ್‌ ಮತ್ತು ಅಮೆರಿಕ ರಚಿಸಿಕೊಂಡಿರುವ ಒಕ್ಕೂಟವಾಗಿದೆ. ಈ ಒಕ್ಕೂಟದ ವಿದೇಶಾಂಗ ಸಚಿವರ ಸಭೆ ವಾಷಿಂಗ್ಟನ್‌ನಲ್ಲಿ ಮಂಗಳವಾರ (ಜುಲೈ 1ರಂದು) ನಡೆದಿದೆ. ಭಾರತದ ಎಸ್‌. ಜೈಶಂಕರ್‌, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಆಸ್ಟ್ರೇಲಿಯಾದ ಪೆನ್ನಿ ವಾಂಗ್‌ ಹಾಗೂ ಜಪಾನ್‌ನ ತಕೇಶಿ ಇವಾಯ ಅವರು ಇದರಲ್ಲಿ ಭಾಗಿಯಾಗಿದ್ದರು.

ADVERTISEMENT

ಸಹಿ ಮಾಡದ ಭಾರತ
ಚೀನಾದ ಚಿಂಗ್‌ಡಾವ್‌ನಲ್ಲಿ ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಶೃಂಗಸಭೆಯ ಜಂಟಿ ಹೇಳಿಕೆಗೆ ಸಹಿ ಮಾಡಲು ಭಾರತ ನಿರಾಕರಿಸಿತ್ತು.

ಪಾಕಿಸ್ತಾನದ ಬಲೂಚಿಸ್ತಾನ ಪರಿಸ್ಥಿತಿಯ ಬಗ್ಗೆ ಹೇಳಿಕೆಯಲ್ಲಿ ಸೇರಿಸಿದ್ದರೂ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಮೇಲಿನ ದಾಳಿಯ ಬಗ್ಗೆ ಯಾವುದೇ ಉಲ್ಲೇಖ ಅದರಲ್ಲಿ ಇರಲಿಲ್ಲ. ಹಾಗಾಗಿ, ಸಭೆಗೆ ಹಾಜರಾಗಿದ್ದ ಭಾರತ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು, ಕರಡಿಗೆ ಸಹಿ ಮಾಡಲು ನಿರಾಕರಿಸಿದ್ದರು. ಇದರಿಂದಾಗಿ, ಜಂಟಿ ಹೇಳಿಕೆ ಬಿಡುಗಡೆಯಾದೆಯೇ ಶೃಂಗಸಭೆ ಅಂತ್ಯಗೊಂಡಿತ್ತು.

ಭಾರತ, ಪಾಕಿಸ್ತಾನ, ಚೀನಾ, ರಷ್ಯಾ, ಇರಾನ್‌, ತಜಕಿಸ್ತಾನ, ಕಿರ್ಗಿಸ್ತಾನ, ಉಜ್ಬೇಕಿಸ್ತಾನ ಹಾಗೂ ಕಜಖಸ್ತಾನ ಎಸ್‌ಸಿಒ ಸದಸ್ಯರಾಷ್ಟ್ರಗಳಾಗಿವೆ.

ಕ್ವಾಡ್‌ ಸಭೆಯಲ್ಲಿ ಎಸ್‌ಸಿಒ ರೀತಿ ಆಗಲಿಲ್ಲ. ನಾಲ್ಕು ರಾಷ್ಟ್ರಗಳನ್ನೊಳಗೊಂಡ ಕ್ವಾಡ್ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ದಾಳಿಯನ್ನು ಸಂಪೂರ್ಣವಾಗಿ ಬಿಟ್ಟುಬಿಡಲಿಲ್ಲ. ಗಡಿಯಾಚಿನ ಭಯೋತ್ಪಾದನೆ, ಉಗ್ರ ಚಟುವಟಿಕೆಗಳು ಸೇರಿದಂತೆ ಯಾವುದೇ ರೀತಿಯ ಹಿಂಸಾಕೃತ್ಯಗಳನ್ನು ಖಂಡಿಸಲಾಗಿದೆ. ಹಾಗೆಯೇ, ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ ನೀಡುವ ಬದ್ಧತೆಯನ್ನು ಪುನರುಚ್ಛರಿಸಲಾಗಿದೆ.

'ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 2025ರ ಏಪ್ರಿಲ್‌ 22ರಂದು ನಡೆದ ಉಗ್ರರ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತವೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ' ಎಂಬುದಾಗಿ ಹೇಳಿಕೆಯಲ್ಲಿ ಸೇರಿಸಲಾಗಿದೆ.

ಅಷ್ಟಲ್ಲದೇ, 'ಇಂತಹ ಖಂಡನೀಯ ಕತ್ಯವೆಸಗಿದವರು, ಸಂಘಟನೆಗಳು, ಅವರಿಗೆ ಹಣಕಾಸು ನೆರವು ನೀಡುತ್ತಿರುವವರನ್ನು ಶೀಘ್ರವೇ ಶಿಕ್ಷೆಗೊಳಪಡಿಸಬೇಕು. ಈ ವಿಚಾರವಾಗಿ ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳು ಸಂಬಂಧಪಟ್ಟ ಆಡಳಿತಗಳಿಗೆ ಸಹಕರ ನೀಡಬೇಕು' ಎಂದು ಕರೆ ನೀಡಲಾಗಿದೆ.

ಲಷ್ಕರ್-ಎ-ತಯಬಾ (ಎಲ್‌ಇಟಿ) ಉಗ್ರ ಸಂಘಟನೆಯ ಘಟಕವಾಗಿರುವ ದಿ ರೆಸಿಸ್ಟನ್ಸ್‌ ಫೋರ್ಸ್‌ (ಟಿಆರ್‌ಎಫ್‌), ಪಹಲ್ಗಾಮ್‌ ದಾಳಿಯ ಹೊಣೆ ಹೊತ್ತುಕೊಂಡಿದೆ. ಭಾರತದ ಮೇಲೆ ಇಂತಹ ದಾಳಿಗಳನ್ನು ನಡೆಸುವ ಎಲ್‌ಇಟಿಯ ಪ್ರಧಾನ ಕಚೇರಿ ಪಾಕಿಸ್ತಾನದಲ್ಲಿದೆ.

ಭಯೋತ್ಪಾದನೆಗೆ ಖಂಡನೆ, ಪಾಕ್ ಟೀಕಿಸಲು ಹಿಂದೇಟು
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದುಷ್ಕೃತ್ಯವನ್ನು ಹಲವು ರಾಷ್ಟ್ರಗಳು ಖಂಡಿಸಿದ್ದರೂ, ಭಾರತ ವಿರುದ್ಧದ ಭಯೋತ್ಪಾದನೆಗೆ ನಿರಂತರವಾಗಿ ಪ್ರಾಯೋಜಕತ್ವ ವಹಿಸುತ್ತಿರುವ ಪಾಕಿಸ್ತಾನವನ್ನು ಟೀಕಿಸಲು ಹಿಂಜರಿದಿವೆ.

ಪಹಲ್ಗಾಮ್‌ ದಾಳಿಗೆ ಪ್ರತಿಯಾಗಿ ಭಾರತೀಯ ಪಡೆಗಳು ಉಗ್ರರ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ಮೇ 7ರಂದು 'ಆಪರೇಷನ್‌ ಸಿಂಧೂರ' ನಡೆಸಿದ ನಂತರ ಮೇ 10ರಂದು ಕದನ ವಿರಾಮ ಘೋಷಣೆಯಾಗುವವರೆಗೆ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ತಲೆದೋರಿತ್ತು. ಆ ಸಂದರ್ಭದಲ್ಲೂ, ಪಾಕ್‌ ಜತೆ ಮಾತುಕತೆ ಮೂಲಕ ಸಂಘರ್ಷ ಶಮನ ಮಾಡಿಕೊಳ್ಳುವಂತೆ ಹಲವು ರಾಷ್ಟ್ರಗಳು ಭಾರತವನ್ನು ಒತ್ತಾಯಿಸಿದ್ದವು.

ವಿರೋಧದ ನಡುವೆ ಟ್ರಂಪ್ 'ಮಧ್ಯಸ್ಥಿಕೆ'
ಭಾರತ ಹಾಗೂ ಪಾಕಿಸ್ತಾನ ಮಾಡಿಕೊಂಡಿದ್ದ ಕದನ ವಿರಾಮ ಒಪ್ಪಂದವನ್ನು (ಮೇ 10ರಂದು) ಮೊದಲು ಘೋಷಣೆ ಮಾಡಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ಮೂರನೇ ರಾಷ್ಟ್ರದ ಮಧ್ಯಸ್ಥಿಕೆಯನ್ನು ಭಾರತ ನಿರಾಕರಿಸುತ್ತಾ ಬಂದಿದೆಯಾದರೂ, ಯುದ್ಧ ನಿಲ್ಲಿಸಿದ್ದು ತಾವೇ ಎಂದು ಟ್ರಂಪ್‌ ಪದೇ ಪದೇ ಹೇಳಿಕೊಂಡಿದ್ದಾರೆ.

ಅದಕ್ಕೂ ಮುನ್ನ, (ಪಹಲ್ಗಾಮ್‌ ದಾಳಿಯ ನಂತರ) ಎರಡೂ ರಾಷ್ಟ್ರಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿರುವುದಾಗಿಯೂ ಹೇಳಿದ್ದ ಅಮೆರಿಕ ಅಧ್ಯಕ್ಷ, ದಕ್ಷಿಣ ಏಷ್ಯಾದ ಈ ಎರಡು (ಭಾರತ, ಪಾಕಿಸ್ತಾನ) ರಾಷ್ಟ್ರಗಳು ಕಾಶ್ಮೀರಕ್ಕಾಗಿ ಸಾವಿರಾರು ವರ್ಷಗಳಿಂದ ಹೋರಾಟ ನಡೆಸುತ್ತಿವೆ ಎಂಬುದಾಗಿಯೂ ಹೇಳಿಕೆ ನೀಡಿದ್ದರು.

ಐಎಸ್‌ಐಎಸ್‌ ಉಗ್ರರನ್ನು ಹೊಡೆದುರುಳಿಸಿದ್ದಕ್ಕಾಗಿ ಪಾಕಿಸ್ತಾನ ಸೇನೆಯನ್ನು ಶ್ಲಾಘಿಸಿದ್ದ ಅಮೆರಿಕ ಸೇನಾ ಕಮಾಂಡರ್‌, ಭಯೋತ್ಪಾದನೆ ನಿಗ್ರಹದಲ್ಲಿ ತನ್ನ 'ಅದ್ವಿತೀಯ ಪಾಲುದಾರ' ಎಂದು ಪಾಕ್‌ ಅನ್ನು ಹೊಗಳಿದ್ದರು.

ಭಾರತ ಟೀಕೆ; ಅಮೆರಿಕದ ಔತಣ ಕೂಟ
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್‌ ಮುನೀರ್‌ ತನ್ನ ಕೋಮುವಾದಿ ಹೇಳಿಕೆಗಳ ಮೂಲಕ ಏಪ್ರಿಲ್‌ 22ರ (ಪಹಲ್ಗಾಮ್‌) ದಾಳಿಗೆ ಪ್ರಚೋದನೆ ನೀಡಿದ್ದಾರೆ ಎಂದು ಭಾರತ ಆರೋಪಿಸಿದೆ. ಅದರ ಹೊರತಾಗಿಯೂ, ಟ್ರಂಪ್‌ ಅವರು ಮುನೀರ್‌ಗೆ ಜೂನ್‌ 18ರಂದು ಶ್ವೇತಭವನದಲ್ಲಿ ಔತಣಕೂಟದ ಆತಿಥ್ಯ ವಹಿಸಿದ್ದರು.

ಅಷ್ಟೇ ಅಲ್ಲ. ಮುನೀರ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಂದೇ ಗುಂಪಿಗೆ ಸೇರಿಸಿ, 'ಇಬ್ಬರು ಅತ್ಯಂತ ಬುದ್ಧಿವಂತ ವ್ಯಕ್ತಿಗಳು' ದಕ್ಷಿಣ ಏಷ್ಯಾದ ಎರಡು ದೇಶಗಳ ನಡುವೆ ಯುದ್ಧವನ್ನು ತಪ್ಪಿಸಿದ್ದಾರೆ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.