ADVERTISEMENT

ತೈಲ ಬೆಲೆ ಏರಿಕೆ: ವಿಪಕ್ಷಗಳ ಖಂಡನೆ

ಪಿಟಿಐ
Published 8 ಜುಲೈ 2019, 20:00 IST
Last Updated 8 ಜುಲೈ 2019, 20:00 IST
   

ನವದೆಹಲಿ: ಕೇಂದ್ರದ ಬಜೆಟ್‌ನಲ್ಲಿ ತೈಲ ಬೆಲೆ ಏರಿಸುವ ಪ್ರಸ್ತಾಪ ಮಾಡಿರುವುದನ್ನು ವಿರೋಧಿಸಿರುವ ವಿವಿಧ ರಾಜಕೀಯ ಪಕ್ಷಗಳು, ‘ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ದೊಡ್ಡ ಹೊರೆಯಾಗುತ್ತದೆ. ಕೂಡಲೇ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದವು.

ಲೋಕಸಭೆಯಲ್ಲಿ ಬಜೆಟ್‌ ಕುರಿತ ಚರ್ಚೆಗೆ ಚಾಲನೆ ನೀಡಿದ ಕಾಂಗ್ರೆಸ್‌ ನಾಯಕ ಶಶಿ ತರೂರ್‌, ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವ ಸಂದರ್ಭದಲ್ಲಿ ನಮ್ಮಲ್ಲಿ ಮಾತ್ರ ಬೆಲೆ ಏರಿಕೆ ಮಾಡಿರುವುದು ಎಂಥ ಬುದ್ಧಿವಂತಿಕೆ’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರದ ತೆರಿಗೆ ನೀತಿಯಿಂದಾಗಿ ಭಾರತದ ಜನರು ಜಗತ್ತಿನ ಬೇರೆ ಯಾವ ರಾಷ್ಟ್ರದಲ್ಲೂ ಇಲ್ಲದಷ್ಟು ದರ ಕೊಟ್ಟು ತೈಲವನ್ನು ಖರೀದಿಸುವಂತಾಗಿದೆ’ ಎಂದು ತರೂರ್‌ ಟೀಕಿಸಿದರು.

‘ತೈಲ ಬೆಲೆ ಏರಿಕೆಯು ಆರ್ಥಿಕವಾಗಿ ಇತರ ಅನೇಕ ಪರಿಣಾಮಗಳನ್ನು ಉಂಟುಮಾಡುತ್ತವೆ. ಅಗತ್ಯ ವಸ್ತುಗಳು ದುಬಾರಿಯಾಗುತ್ತವೆ. ಜನಸಾಮಾನ್ಯರಿಗೆ ಇಂಥ ಶಿಕ್ಷೆಯನ್ನೇಕೆ ಕೊಡಬೇಕು? ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು, ಮಾತ್ರವಲ್ಲ ಡೀಸೆಲ್‌ ಹಾಗೂ ಪೆಟ್ರೋಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಯೊಳಗೆ ತರಬೇಕು’ ಎಂದು ಡಿಎಂಕೆಯ ಟಿ.ಆರ್‌. ಬಾಲು ಒತ್ತಾಯಿಸಿದರು.

ಟಿಎಂಸಿಯ ಕಲ್ಯಾಣ್‌ ಬ್ಯಾನರ್ಜಿ ಅವರೂ ತೈಲ ಬೆಲೆ ಏರಿಕೆಯ ಪ್ರಸ್ತಾಪವನ್ನು ಖಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.