ADVERTISEMENT

‘ಆಪರೇಷನ್ ಸಿಂಧೂರ’ ಈಗ ಶೌರ್ಯದ ಸಂಕೇತವಾಗಿದೆ: ಪ್ರಧಾನಿ ಮೋದಿ

ಪಿಟಿಐ
Published 31 ಮೇ 2025, 9:33 IST
Last Updated 31 ಮೇ 2025, 9:33 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಭೋಪಾಲ್: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತದ ಸಶಸ್ತ್ರ ಪಡೆಗಳು ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬಳಿಕ ‘ಸಿಂಧೂರ’ ಎಂಬುದು ಶೌರ್ಯದ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಭೋಪಾಲ್‌ನಲ್ಲಿ ಮಹಿಳಾ ಸಶಕ್ತೀಕರಣ ಮಹಾ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.

ADVERTISEMENT

‘ಆಪರೇಷನ್ ಸಿಂಧೂರ’ ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಾಗಿದೆ. ಪಾಕಿಸ್ತಾನ ನಡೆಸುವ ಗುಂಡಿನ ದಾಳಿಗಳಿಗೆ ಫಿರಂಗಿ ಗುಂಡುಗಳ ಮೂಲಕವೇ ಉತ್ತರಿಸುತ್ತೇವೆ ಎಂಬುದಕ್ಕೆ ಇದುವೇ ಸ್ಪಷ್ಟ ನಿದರ್ಶನ ಎಂದು ಎಂದು ಮೋದಿ ಗುಡುಗಿದ್ದಾರೆ.

ಭಾರತ ಸಂಸ್ಕೃತಿ ಮತ್ತು ಸಂಪ್ರದಾಯಗಳ ದೇಶವಾಗಿದೆ. ನಮ್ಮ ಸಂಪ್ರದಾಯದಲ್ಲಿ ‘ಸಿಂಧೂರ’ ಮಹಿಳಾ ಶಕ್ತಿಯ ಸಂಕೇತವಾಗಿದೆ. ರಾಮ ಭಕ್ತಿಯಲ್ಲಿ ಮುಳುಗಿರುವ ಹನುಮಾನ್ ಜಿ ಅವರು ಸಿಂಧೂರ ಹಚ್ಚಿಕೊಂಡಿರುವುದನ್ನು ನಾವು ನೋಡಬಹುದು. ಹಾಗೆಯೇ ಶಕ್ತಿ ಪೂಜೆಯಲ್ಲಿ ಸಿಂಧೂರ ನೀಡುತ್ತೇವೆ. ಇದೀಗ ‘ಸಿಂಧೂರ’ ಎಂಬುದು ಶೌರ್ಯದ ಸಂಕೇತವಾಗಿದೆ ಎಂದು ಬಣ್ಣಿಸಿದ್ದಾರೆ.

‘ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಭಾರತೀಯರ ರಕ್ತವನ್ನು ಹರಿಸಿದ್ದಲ್ಲದೆ, ನಮ್ಮ ಸಂಸ್ಕೃತಿಯ ಮೇಲೂ ದಾಳಿ ಮಾಡಿದ್ದಾರೆ. ಉಗ್ರರು ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸುವುದರ ಜತೆಗೆ ದೇಶದ ಮಹಿಳಾ ಶಕ್ತಿಗೆ ಸವಾಲು ಹಾಕಿದ್ದಾರೆ’ ಎಂದು ಮೋದಿ ಗುಡುಗಿದ್ದಾರೆ.

ಇದೇ ಸವಾಲು ಉಗ್ರರು ಮತ್ತು ಅವರನ್ನು ಪೋಷಿಸುವವರಿಗೆ ಮರಣದಂಡನೆಯಾಗಿದೆ. ಪಾಕಿಸ್ತಾನ ಸೇನೆಯು ಊಹಿಸಲೂ ಸಾಧ್ಯವಾಗದಷ್ಟರ ಮಟ್ಟಿಗೆ ನಮ್ಮ ಸೇನೆಯು ಉಗ್ರರ ಅಡಗುತಾಣಗಳನ್ನು ನಾಶಪಡಿಸಿದೆ ಎಂದು ಅವರು ಹೇಳಿದ್ದಾರೆ.

ಈ ಬಾರಿ 75 ಮಹಿಳೆಯರು ಸಂಸತ್ ಸದಸ್ಯರಾಗಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸುವುದು ನಮ್ಮ ಕರ್ತವ್ಯವಾಗಿದೆ. ಇದು ನಾರಿ ಶಕ್ತಿ ವಂದನ ಅಧಿನಿಯಮದ ಹಿಂದಿನ ಸ್ಫೂರ್ತಿ. ಸಂಸತ್‌ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಎಂದೂ ಕರೆಯಲ್ಪಡುವ ನಾರಿ ಶಕ್ತಿ ವಂದನ ಅಧಿನಿಯಮದ ಅನ್ವಯ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮೀಸಲಿಡುವ ಗುರಿಯನ್ನು ಹೊಂದಿದೆ. ಇದರರ್ಥ ಬಿಜೆಪಿ ಸರ್ಕಾರವು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಪ್ರತಿಯೊಂದು ಹಂತದಲ್ಲೂ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಸಬಲೀಕರಣಗೊಳಿಸುತ್ತಿದೆ ಎಂದು ಅವರು ವರ್ಣಿಸಿದ್ದಾರೆ.

ಇಂದು ನಮ್ಮ ದೇಶದ ಹೆಣ್ಣು ಮಕ್ಕಳು ರಾಷ್ಟ್ರ ರಕ್ಷಣೆಯಲ್ಲಿ ಹೇಗೆ ಸಮರ್ಥರಾಗಿದ್ದಾರೆ ಎಂಬುದನ್ನು ಜಗತ್ತು ನೋಡುತ್ತಿದೆ. ಶಾಲೆಯಿಂದ ಯುದ್ಧಭೂಮಿಯವರೆಗೆ, ಇಡೀ ದೇಶವು ಹೆಣ್ಣುಮಕ್ಕಳ ಸಾಧನೆ ಬಗ್ಗೆ ಹೆಚ್ಚು ನಂಬಿಕೆ ಇಟ್ಟಿಕೊಂಡಿದೆ. ನಮ್ಮ ಸರ್ಕಾರವು ಸಹ ಇದೇ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.