ADVERTISEMENT

ದೇಶದ ಧ್ವನಿ ಎತ್ತಿದ್ದ ಸರ್ವಪಕ್ಷ ನಿಯೋಗಗಳ ಕುರಿತು ಪ್ರಧಾನಿ ಮೋದಿ ಹೆಮ್ಮೆ

ಪಿಟಿಐ
Published 11 ಜೂನ್ 2025, 2:43 IST
Last Updated 11 ಜೂನ್ 2025, 2:43 IST
<div class="paragraphs"><p>ಸರ್ವಪಕ್ಷ ನಿಯೋಗಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ</p></div>

ಸರ್ವಪಕ್ಷ ನಿಯೋಗಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

   

(ಪಿಟಿಐ ಚಿತ್ರ)

ನವದೆಹಲಿ: ಪಾಕಿಸ್ತಾನದ ಮೇಲೆ 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆಯ ಬಳಿಕ ಭಯೋತ್ಪಾದನೆ ಕುರಿತು ಭಾರತದ ನಿಲುವು ಸ್ಪಷ್ಟಪಡಿಸಲು ವಿವಿಧ ದೇಶಗಳಿಗೆ ಪ್ರವಾಸ ತೆರಳಿದ್ದ ಸರ್ವಪಕ್ಷ ನಿಯೋಗಗಳ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ವಿವಿಧ ದೇಶಗಳಿಗೆ ತೆರಳಿ ಸರ್ವಪಕ್ಷ ನಿಯೋಗಗಳು ಮಂಡಿಸಿರುವ ರೀತಿಯು ಅತೀವ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದನೆ ದಾಳಿಗೆ ಪ್ರತೀಕಾರವಾಗಿ ಭಾರತ 'ಆಪರೇಷನ್ ಸಿಂಧೂರ' ಹೆಸರಿನಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು.

ಕಳೆದ ಕೆಲವು ವಾರಗಳಲ್ಲಿ ಮಾಜಿ ಸಂಸದರು, ‌ಮಾಜಿ ರಾಯಭಾರಿಗಳೂ ಸೇರಿದಂತೆ ಸರ್ವಪಕ್ಷ ನಿಯೋಗವು ಒಟ್ಟು 33 ದೇಶಗಳಿಗೆ ಭೇಟಿ ನೀಡಿತ್ತು.

ಈ ಕುರಿತು 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, 'ವಿವಿಧ ದೇಶಗಳಿಗೆ ದೇಶವನ್ನು ಪ್ರತಿನಿಧಿಸಿದ ಸರ್ವಪಕ್ಷ ನಿಯೋಗಗಳ ಸದಸ್ಯರನ್ನು ಭೇಟಿಯಾಗಿ ಶಾಂತಿಗೆ ಭಾರತದ ಬದ್ಧತೆ ಮತ್ತು ಭಯೋತ್ಪಾದನೆ ನಿರ್ಮೂಲನೆ ಮಾಡುವ ಅಗತ್ಯವನ್ನು ವಿವರಿಸಿದೆ. ಭಾರತದ ಧ್ವನಿಯನ್ನು ಮಂಡಿಸಿದ ರೀತಿಗೆ ನಾವೆಲ್ಲರೂ ಹೆಮ್ಮೆಪಟ್ಟುಕೊಳ್ಳುತ್ತೇವೆ' ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರವಾಸ ಕೈಗೊಂಡಿದ್ದ ಸರ್ವಪಕ್ಷ ನಿಯೋಗಗಳ ಸಂಸದರು ಪ್ರಧಾನಿ ಅವರ ಜೊತೆಗೆ ಅನುಭವ ಹಂಚಿಕೊಂಡರು. ವಿವಿಧ ಪಕ್ಷಗಳಿಗೆ ಸೇರಿದ ಸುಮಾರು 50 ಮಂದಿ ಹಾಲಿ ಸಂಸದರು ಪ್ರವಾಸ ಕೈಗೊಂಡಿದ್ದರು.

'ದೇಶ ಸೇವೆಗೆ ಅವಕಾಶ ದೊರಕಿದ್ದಕ್ಕಾಗಿ ನಾವೆಲ್ಲರೂ ಕೃತಜ್ಞರಾಗಿದ್ದೇವೆ' ಎಂದು ಅಮೆರಿಕ ನಿಯೋಗದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ತಿಳಿಸಿದ್ದಾರೆ.

ನಾಲ್ಕು ನಿಯೋಗದ ನೇತೃತ್ವವನ್ನು ಎನ್‌ಡಿಎ ಪಕ್ಷಗಳ ಸದಸ್ಯರು, ಮೂರು ನಿಯೋಗಗಳ ನೇತೃತ್ವವನ್ನು ಕ್ರಮವಾಗಿ ಕಾಂಗ್ರೆಸ್, ಡಿಎಂಕೆ ಮತ್ತು ಎನ್‌ಸಿಪಿ (ಎಸ್‌ಪಿ) ಸಂಸದರು ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.