ADVERTISEMENT

Pahalgam Terror attack | ಪ್ರತೀಕಾರ: ಸೇನೆಗೆ ಸಂಪೂರ್ಣ ಅಧಿಕಾರ- ಪ್ರಧಾನಿ ಮೋದಿ

ಪಿಟಿಐ
Published 30 ಏಪ್ರಿಲ್ 2025, 1:51 IST
Last Updated 30 ಏಪ್ರಿಲ್ 2025, 1:51 IST
<div class="paragraphs"><p>ನವದೆಹಲಿಯಲ್ಲಿರುವ ಪ್ರಧಾನಿ ನಿವಾಸದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನರೇಂದ್ರ ಮೋದಿ ಮಾತನಾಡಿದರು. ಸೇನಾ ಮುಖ್ಯಸ್ಥರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದ್ದಾರೆ.</p></div>

ನವದೆಹಲಿಯಲ್ಲಿರುವ ಪ್ರಧಾನಿ ನಿವಾಸದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನರೇಂದ್ರ ಮೋದಿ ಮಾತನಾಡಿದರು. ಸೇನಾ ಮುಖ್ಯಸ್ಥರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದ್ದಾರೆ.

   

ಪಿಟಿಐ ಚಿತ್ರ

ನವದೆಹಲಿ:ಪಹಲ್ಗಾಮ್‌ನ ಭಯೋತ್ಪಾದಕರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತವು ತನ್ನ ಆಯ್ಕೆಗಳನ್ನು ಪರಿಶೀಲಿಸುತ್ತಿರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಉಗ್ರರ ದಮನಕ್ಕೆ ದಾಳಿಯ ಮಾದರಿ, ಗುರಿ ಹಾಗೂ ಸಮಯ ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ ಇದೆ ಎಂದು ಮೋದಿ ಅವರು ಸೇನೆಗಳ ಮುಖ್ಯಸ್ಥರಿಗೆ ಸಂದೇಶ ನೀಡಿದರು. 

ADVERTISEMENT

ಭಯೋತ್ಪಾದಕರ ದಾಳಿಗೆ 26 ಮಂದಿ ಮೃತಪಟ್ಟ ಬಳಿಕ ಭದ್ರತೆ ಕುರಿತ ಸಂಪುಟ ಸಮಿತಿ ಸಭೆ ಎರಡನೇ ಬಾರಿ ನಡೆಯುತ್ತಿದೆ. ಅದಕ್ಕೆ ಒಂದು ದಿನ ಮೊದಲು ರಕ್ಷಣಾ ಸಚಿವ ರಾಜನಾಥ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌, ಚೀಫ್‌ ಆಫ್ ಡಿಫೆನ್ಸ್‌ ಸ್ಟಾಫ್ (ಸಿಡಿಎಸ್‌) ಜನರಲ್ ಅನಿಲ್‌ ಚೌಹಾಣ್ ಅವರಲ್ಲದೆ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ. ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೋದಿ ಅವರನ್ನು ಭೇಟಿ ಮಾಡಿ ಸರ್ಕಾರದ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಿದರು.

ಉನ್ನತ ಮಟ್ಟದ ಸಭೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮನ್ ಪ್ರೀತ್ ಸಿಂಗ್ ಅವರು ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದರು. ಸಶಸ್ತ್ರ ಪಡೆಗಳ ವೃತ್ತಿಪರ ಸಾಮರ್ಥ್ಯದ ಮೇಲೆ ಮೋದಿ ಅವರು ಸಂಪೂರ್ಣ ನಂಬಿಕೆ ಹಾಗೂ ವಿಶ್ವಾಸ ವ್ಯಕ್ತಪಡಿಸಿದರು. ಭಯೋತ್ಪಾದನೆಗೆ ಘೋರ ಹೊಡೆತ ನೀಡುವುದು ರಾಷ್ಟ್ರೀಯ ಸಂಕಲ್ಪ ಎಂದು ಪ್ರಧಾನಿಯವರು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದಕರ ದಾಳಿಯ ನಂತರ ಬಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಗೂ ಮನ್‌ ಕಿ ಬಾತ್‌ನಲ್ಲಿ ಮಾತನಾಡಿದ್ದ ಪ್ರಧಾನಿಯವರು ಉಗ್ರರ ಮೂಲೋತ್ಪಾಟನೆಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಪಥ ಮಾಡಿದ್ದರು. ‘ಪ್ರವಾಸಿಗರನ್ನು ಹತ್ಯೆ ಮಾಡಿರುವ ಉಗ್ರರನ್ನು ಹುಡುಕಿ ಶಿಕ್ಷಿಸಲಾಗುವುದು. ಅವರ ಕಲ್ಪನೆಗೂ ಮೀರಿದಂತಹ ಶಿಕ್ಷೆ ನೀಡಲಾಗುವುದು.ಎಲ್ಲಿಯೇ ಅಡಗಿದ್ದರೂ ಅವರನ್ನು ಪತ್ತೆ ಮಾಡಲಾಗುವುದು. ಉಗ್ರರಿಗೆ ಮಾತ್ರವಲ್ಲ ಅವರಿಗೆ ಬೆಂಬಲ ನೀಡುತ್ತಿರುವವರನ್ನೂ ಭಾರತ ದಂಡಿಸಲಿದೆ’ ಎಂದು ಎಚ್ಚರಿಸಿದ್ದರು. ಪಾಕಿಸ್ತಾನವನ್ನು ಗಗುರಿಯಾಗಿರಿಸಿ ಅವರು ಈ ಮಾತುಗಳನ್ನು ಹೇಳಿದ್ದರು. 

ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಲು ಏಪ್ರಿಲ್‌ 23ರಂದು ಭದ್ರತೆ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಪಾಕಿಸ್ತಾನಿ ಪ್ರಜೆಗಳ ವೀಸಾಗಳ ರದ್ದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಂಡಿತ್ತು. 

ಮಂಗಳವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ‘ಸಮಯ ಕಡಿಮೆ ಇದೆ. ಗುರಿ ದೊಡ್ಡದು ಇದೆ’ ಎಂದು ಹೇಳಿದರು. ಬಳಿಕ ಅವರು, ಈ ಮಾತನ್ನು ಪ್ರಸ್ತುತ ಪರಿಸ್ಥಿತಿ ಬಗ್ಗೆ ಹೇಳುತ್ತಿಲ್ಲ ಎಂದೂ ಸ್ಪಷ್ಟಪಡಿಸಿದರು. ‘ಅಭಿವೃದ್ಧಿ ಹೊಂದಿದ ಭಾರತದ ಗುರಿಗಾಗಿ ನಾವು ಮುಂದಿನ 25 ವರ್ಷಗಳ ಕಾಲಮಿತಿ ನಿಗದಿಪಡಿಸಿದ್ದೇವೆ. ನಮಗೆ ಸೀಮಿತ ಸಮಯವಿದೆ; ಗುರಿಗಳು ದೊಡ್ಡದಿವೆ’ ಎಂದು ಅವರು ತಿಳಿಸಿದರು.

ಉರಿಯಲ್ಲಿ ಸೈನಿಕರ ಮೇಲಿನ ಭಯೋತ್ಪಾದಕ ದಾಳಿ ಮತ್ತು ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿಯ ಹತ್ಯೆಯ ನಂತರ ಕೇಂದ್ರ ಸರ್ಕಾರವು ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ದಾಳಿ ನಡೆಸಿತ್ತು.

ಮಂಗಳವಾರ ಇಲ್ಲಿ ಪ್ರತ್ಯೇಕವಾಗಿ, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಮೂರು ಅರೆಸೈನಿಕ ಪಡೆಗಳ ಮುಖ್ಯಸ್ಥರು ಮತ್ತು ಇತರ ಎರಡು ಭದ್ರತಾ ಸಂಸ್ಥೆಗಳ ಹಿರಿಯ ಅಧಿಕಾರಿ ಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಯಿತು ಎಂಬುದು ಬಹಿರಂಗಗೊಂಡಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.