ADVERTISEMENT

Pahalgam Attack | ಮಾಸ್ಟರ್‌ಮೈಂಡ್‌ ಸಜಾದ್ ಗುಲ್‌; ಬೆಂಗಳೂರಿಗೇಕೆ ಬಂದಿದ್ದ?

ಪಿಟಿಐ
Published 7 ಮೇ 2025, 12:26 IST
Last Updated 7 ಮೇ 2025, 12:26 IST
<div class="paragraphs"><p>ಶೇಖ್ ಸಜಾದ್ ಗುಲ್</p></div>

ಶೇಖ್ ಸಜಾದ್ ಗುಲ್

   

ಎನ್‌ಐಎ ಎಕ್ಸ್ ಖಾತೆ

ನವದೆಹಲಿ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಗುಂಡಿಟ್ಟು ಕೊಂದ ಕೃತ್ಯದ ಹೊಣೆ ಹೊತ್ತ ಪಾಕಿಸ್ತಾನದ ದಿ ರೆಸಿಸ್ಟಂಟ್ ಫ್ರಂಟ್‌ (TRF) ಮುಖ್ಯಸ್ಥ ಶೇಖ್ ಸಜಾದ್ ಗುಲ್‌ ಇದರ ಹಿಂದಿರುವ ವ್ಯಕ್ತಿ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ADVERTISEMENT

50 ವರ್ಷದ ಗುಲ್‌ ಕಾಶ್ಮೀರ ಮೂಲದವನು. ಏ. 22ರಂದು ಪ್ರವಾಸಿಗರನ್ನೇ ಗುರಿಯಾಗಿಸಿ ನಡೆಸಿದ ಗುಂಡಿನ ದಾಳಿಯ ಹಿಂದೆ ಈತನದ್ದೇ ಕೈವಾಡ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಕಂಟೋನ್ಮೆಂಟ್‌ ಪ್ರದೇಶದಲ್ಲಿ ನೆಲೆಸಿರುವ ಈತ ಲಷ್ಕರ್ ಎ ತಯಬಾ ಸಂಘಟನೆಯ ಸದಸ್ಯನೂ ಹೌದು. ಈತನನ್ನು ಸಜಾದ್ ಅಹ್ಮದ್ ಶೇಖ್ ಎಂದೂ ಕರೆಯಲಾಗುತ್ತದೆ. ಹಲವು ಭಯೋತ್ಪಾದಕ ದಾಳಿಗಳ ಯೋಜನೆ ರೂಪಿಸಿದ್ದು ಈತನೇ. ಇದರಲ್ಲಿ 2020ರಿಂದ 2024ರವರೆಗೆ ಕೇಂದ್ರ ಮತ್ತು ದಕ್ಷಿಣ ಕಾಶ್ಮೀರದಲ್ಲಿ ಹಲವರ ಹತ್ಯೆ, 2023ರಲ್ಲಿ ಕಾಶ್ಮೀರದಲ್ಲಿ ನಡೆಸಿದ ಗ್ರನೇಡ್ ದಾಳಿ ಸೇರಿದಂತೆ ಹಲವು ದಾಳಿಗಳಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ.

2022ರ ಏಪ್ರಿಲ್‌ನಲ್ಲಿ ಈತನನ್ನು ಭಯೋತ್ಪಾದಕ ಎಂದು ಘೋಷಿಸಿದ ಎನ್‌ಐಎ, ಈತನ ತಲೆಗೆ ₹10 ಲಕ್ಷ ಬಹುಮಾನ ಘೋಷಿಸಿತು.

ಪಹಲ್ಗಾಮ್ ದಾಳಿಯ ನಂತರ ನಡೆದ ತನಿಖೆಯಲ್ಲಿ ಗುಲ್‌ನ ಕೈವಾಡ ಇರುವುದನ್ನು ಪತ್ತೆ ಮಾಡಿರುವುದಾಗಿ ಎನ್‌ಐಎ ಹೇಳಿದೆ. ಗುಲ್‌ನ ನಿರ್ದೇಶನದಂತೆ ಭಯೋತ್ಪಾದಕರ ತಂಡ ದಾಳಿ ನಡೆಸಿತ್ತು. ಇದರಲ್ಲಿ 25 ಪ್ರವಾಸಿಗರನ್ನು ಧರ್ಮ ಕೇಳಿ ಗುಂಡು ಹೊಡೆದು ಸಾಯಿಸಲಾಯಿತು. ಒಬ್ಬ ಸ್ಥಳೀಯ ಪ್ರವಾಸಿ ಮಾರ್ಗದರ್ಶಕನನ್ನೂ ಇವರು ಕೊಂದರು.

ಬೆಂಗಳೂರಿನಲ್ಲಿ ಎಂಬಿಎ ಪದವಿ ಪಡೆದ ಗುಲ್

ಶ್ರೀನಗರದಲ್ಲಿ ಶಿಕ್ಷಣ ಪಡೆದ ಗುಲ್‌, ಬೆಂಗಳೂರಿನಲ್ಲಿ ಎಂಬಿಎ ಪೂರ್ಣಗೊಳಿಸಿ್ದ. ನಂತರ ಕೇರಳದಲ್ಲಿ ಲ್ಯಾಬ್‌ ಟೆಕ್ನೀಷಿಯನ್‌ ಕೋರ್ಸ್‌ ಸೇರಿದ್ದ. ಕಾಶ್ಮೀರಕ್ಕೆ ಮರಳಿದ ಈತ ಅಲ್ಲಿ ಡಯಾಗ್ನಾಸ್ಟಿಕ್ ಲ್ಯಾಬ್ ತೆರೆದ. ಇದರ ಜತೆಯಲ್ಲೇ ಭಯೋತ್ಪಾದಕ ಸಂಘಟನೆಗಳಿಗೆ ಸರಕುಗಳನ್ನು ಸಾಗಿಸುವ ಕೆಲಸವನ್ನೂ ಮಾಡುತ್ತಿದ್ದ. ಅಲ್ಲಿಂದ ಲಷ್ಕರ್‌ ಎ ತಯಬಾ ಮೂಲಕ ಪಾಕಿಸ್ತಾನದ ಐಎಸ್‌ಐಗೆ ಕೆಲಸ ಮಾಡಲಾರಂಭಿಸಿದ.

2002ರಲ್ಲಿ 5 ಕೆ.ಜಿ. ಆರ್‌ಡಿಎಕ್ಸ್ ಹೊಂದಿದ್ದ ಗುಲ್‌ನನ್ನು ನಿಜಾಮುದ್ದೀನ್ ರೈಲ್ವೆ ನಿಲ್ದಾಣದ ಬಳಿ ದೆಹಲಿ ಪೊಲೀಸರು ಸೆರೆ ಹಿಡಿದಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ಸರಣಿ ಸ್ಫೋಟಗಳನ್ನು ನಡೆಸುವ ಸಂಚು ರೂಪಿಸಿದ್ದ ಅಪರಾಧದಡಿ 2003ರ ಆ. 7ರಂದು ಈತನಿಗೆ 10 ವರ್ಷ ಜೈಲು ಶಿಕ್ಷೆಯಾಗಿತ್ತು.

2017ರಲ್ಲಿ ಬಿಡುಗಡೆ ನಂತರ ಪಾಕಿಸ್ತಾನಕ್ಕೆ ತೆರಳಿದ ಈತನನ್ನು ಸಂಪರ್ಕಿಸಿದ ಐಎಸ್‌ಐ, ಲಷ್ಕರ್ ಎ ತಯಬಾದ ಅಂಗ ಸಂಸ್ಥೆಯಾದ ದಿ ರೆಸಿಸ್ಟೆನ್ಸ್‌ ಫ್ರಂಟ್‌ನ ನೇತೃತ್ವದ ಹೊಣೆ ನೀಡಿತು. ಆ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಹೊಣೆಯನ್ನು ಈತ 2019ರಿಂದ ಹೊತ್ತಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2019ರಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲೂ ಟಿಆರ್‌ಎಫ್‌ ಭಾಗಿಯಾಗಿತ್ತು. ಈತನ ಸೋದರ ಶ್ರೀನಗರದ ಶ್ರೀ ಮಹಾರಾಜಾ ಹರಿ ಸಿಂಗ್ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ. 1990ರಲ್ಲಿ ಈತನೂ ಭಯೋತ್ಪಾದನಾ ಸಂಘಟನೆ ಸೇರಿದ್ದ. ಸೌದಿ ಅರೇಬಿಯಾಗೆ ತೆರಳಿದ್ದ ಈತ ನಂತರ ಪಾಕಿಸ್ತಾನಕ್ಕೆ ಮರಳಿದ್ದ. ಸದ್ಯ ಈತ ಕೊಲ್ಲಿ ರಾಷ್ಟ್ರಗಳಿಂದ ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.