ADVERTISEMENT

ಟ್ರಂಪ್‌ಗೆ ಮೋದಿ ಹೇಳಿದ್ದೇನು?: ಸರ್ವಪಕ್ಷ ಸಭೆಗೆ ಕಾಂಗ್ರೆಸ್ ಒತ್ತಾಯ

ಪಿಟಿಐ
Published 18 ಜೂನ್ 2025, 10:13 IST
Last Updated 18 ಜೂನ್ 2025, 10:13 IST
<div class="paragraphs"><p>ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್, ಜೈರಾಮ್ ರಮೇಶ್</p></div>

ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್, ಜೈರಾಮ್ ರಮೇಶ್

   

(ರಾಯಿಟರ್ಸ್, ಪಿಟಿಐ ಚಿತ್ರ)

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ವಿವರಣೆ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಮೂರು ರಾಷ್ಟ್ರಗಳ ಪ್ರವಾಸದ ಮುಗಿಸಿ ಹಿಂತಿರುಗಿದ ಕೂಡಲೇ ಪ್ರಧಾನಿ ಮೋದಿ ಸರ್ವಪಕ್ಷ ಸಭೆಯನ್ನು ಕರೆದು ವಿಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.

ADVERTISEMENT

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರಿಗೆ ಡೊನಾಲ್ಡ್ ಟ್ರಂಪ್ ಔತಣಕೂಟ ಏರ್ಪಡಿಸಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿದ ಕಾಂಗ್ರೆಸ್, ಇದು ಭಾರತದ ಪಾಲಿಗೆ 'ದೊಡ್ಡ ಹಿನ್ನಡೆ' ಎಂದು ಹೇಳಿದೆ. ಅಲ್ಲದೆ ದೂರವಾಣಿ ಸಂಭಾಷಣೆಯ ವೇಳೆ ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಬೇಕಿತ್ತು ಎಂದು ಹೇಳಿದೆ.

ಕಾರ್ಗಿಲ್ ಪರಿಶೀಲನಾ ಸಮಿತಿ ರೀತಿಯಲ್ಲಿ ಪಹಲ್ಗಾಮ್ ಪರಿಶೀಲನಾ ಸಮಿತಿಯನ್ನು ರಚಿಸುವಂತೆಯೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.

'ಭಾರತೀಯ ರಾಜತಾಂತ್ರಿಕತೆಗೆ ತ್ರಿವಳಿ ಆಘಾತ ಎದುರಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯನ್ನು ರೂಪಿಸಿರುವ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಫೀಲ್ಡ್ ಮಾರ್ಷಲ್ ಮುನೀರ್ ಅವರು ಟ್ರಂಪ್ ಅವರೊಂದಿಗೆ ಔತನಕೂಟದಲ್ಲಿ ಭಾಗಿಯಾಗಲಿದ್ದಾರೆ. ಇದು ಭಾರತದ ಪಾಲಿಗೆ ದೊಡ್ಡ ಹಿನ್ನಡೆ' ಎಂದು ಅವರು ಹೇಳಿದ್ದಾರೆ.

'ಎರಡನೇಯದಾಗಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್ ಪ್ರಮುಖ ಪಾಲುದಾರ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಮುಖ್ಯಸ್ಥರಾದ ಜನರಲ್ ಮೈಕೆಲ್ ಕುರಿಲ್ಲಾ ಹೇಳಿದ್ದಾರೆ. 2011ರಲ್ಲಿ ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿದ್ದ ಪಾಕಿಸ್ತಾನ ಹೇಗೆ ಪಾಲುದಾರನಾಗುತ್ತದೆ' ಎಂದು ಅವರು ಪ್ರಶ್ನಿಸಿದ್ದಾರೆ.

'ಮೂರನೇ ಹಿನ್ನಡೆ ಏನೆಂದರೆ ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವುದು ತಾನು ಎಂದು ಟ್ರಂಪ್ ಈಗಾಗಲೇ 14 ಸಲ ಹೇಳಿಕೆ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ' ಎಂದು ಅವರು ಹೇಳಿದ್ದಾರೆ.

ಟ್ರಂಪ್ ಅವರೊಂದಿಗೆ ಮೋದಿ ಅವರ 35 ನಿಮಿಷಗಳ ಮಾತುಕತೆ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾಹಿತಿ ನೀಡಿದ್ದಾರೆ. 'ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಪ್ರಧಾನಿ ಮೋದಿ ವಿವರಣೆ ನೀಡಿದ್ದು, ಭಾರತ-ಪಾಕ್ ಬಿಕ್ಕಟ್ಟಿನಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.