ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್
ಎಕ್ಸ್ ಚಿತ್ರ
ನವದೆಹಲಿ: ‘ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂಬುದನ್ನು ಚೆನ್ನಾಗಿ ಬಲ್ಲ ಪಾಕಿಸ್ತಾನ ಸೇನೆಯು ತನ್ನ ವಾಯು ಪ್ರದೇಶವನ್ನೇ ಗುರಾಣಿಯನ್ನಾಗಿ ಬಳಸಿಕೊಂಡ ಕೃತ್ಯ ಬಯಲಾಗಿದೆ’ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಶುಕ್ರವಾರ ಹೇಳಿದ್ದಾರೆ.
ವಿದೇಶಾಂಗ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯ ನಡೆಸುತ್ತಿರುವ ಜಂಟಿ ಪ್ರತಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
‘ಪಾಕಿಸ್ತಾನ ಸೇನೆಯು ಈಗಲೂ ತನ್ನ ಬೇಜವಾಬ್ದಾರಿ ಕೆಲಸವನ್ನು ಮುಂದುವರಿಸಿದೆ. ಅದು ತನ್ನ ನಾಗರಿಕ ವಾಯು ಪ್ರದೇಶವನ್ನು ಮುಚ್ಚದೆ, ಅದನ್ನೇ ಗುರಾಣಿಯಾಗಿ ಬಳಸಿ ಡ್ರೋನ್ ಮತ್ತು ಕ್ಷಿಪಣಿಗಳ ಉಡ್ಡಯನಕ್ಕೆ ಬಳಸಿದೆ. ಹೀಗಾಗಿ ಅಂತರರಾಷ್ಟ್ರೀಯ ವಿಮಾನಗಳನ್ನೂ ಒಳಗೊಂಡು ಪಾಕಿಸ್ತಾನದ ವಾಯು ಪ್ರದೇಶ ಬಳಸುವುದು ಸುರಕ್ಷಿತವಲ್ಲ. ಭಾರತೀಯ ವಾಯು ಸೇನೆಯು ಸೂಕ್ತ ಪ್ರತ್ಯುತ್ತರ ನೀಡುವ ಮೂಲಕ ಕರಾಚಿ ಮತ್ತು ಲಾಹೋರ್ ಮಾರ್ಗವನ್ನು ಬಳಸುತ್ತಿರುವ ಅಂತರರಾಷ್ಟ್ರೀಯ ವಿಮಾನಗಳ ರಕ್ಷಣೆಯ ಕಾರ್ಯವನ್ನು ನಿರ್ವಹಿಸುತ್ತಿದೆ’ ಎಂದಿದ್ದಾರೆ.
‘ಪಂಜಾಬ್ ಪ್ರಾಂತ್ಯದಲ್ಲಿರುವ ನಮ್ಮ ರಾಡಾರ್ 24ರ ಸ್ಕ್ರೀನ್‌ಶಾಟ್‌ಗಳನ್ನು ಗಮನಿಸಿದರೆ ನಾಗರಿಕ ವಾಯು ಮಾರ್ಗದ ಬಳಕೆಯನ್ನು ಭಾರತ ಸಂಪೂರ್ಣವಾಗಿ ರದ್ದುಪಡಿಸಿರುವುದು ಮತ್ತು ಪಾಕಿಸ್ತಾನ ಅದನ್ನು ಬಳಸಿರುವುದು ಸ್ಪಷ್ಟವಾಗಿದೆ’ ಎಂದು ತಿಳಿಸಿದ್ದಾರೆ.
‘ಭಟಿಂಡಾ ಸೇನಾ ನೆಲೆ ಮೇಲೆ ಪಾಕಿಸ್ತಾನ ಸೇನೆಯ ದಾಳಿಯ ಯತ್ನವನ್ನು ಭಾರತೀಯ ಸೇನೆ ತಕ್ಕ ಪ್ರತ್ಯುತ್ತರದ ಮೂಲಕ ನಿಷ್ಕ್ರಿಯಗೊಳಿಸಿದೆ. ಡ್ರೋನ್ ಮೂಲಕ ಪಾಕಿಸ್ತಾನದ ನಾಲ್ಕು ಸೇನಾ ನೆಲೆಗಳ ಮೇಲೆ ಭಾರತ ದಾಳಿ ನಡೆಸಿತು. ಇದರಲ್ಲಿ ಒಂದು ವಾಯು ರಕ್ಷಣಾ ರಾಡಾರ್ ಅನ್ನು ಧ್ವಂಸಗೊಳಿಸುವಲ್ಲಿ ನಮ್ಮ ಡ್ರೋನ್ ಸಫಲವಾಗಿದೆ’ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ವಿವರಿಸಿದ್ದಾರೆ.
‘ನಿಯಂತ್ರಣ ರೇಖೆ ಬಳಿ ಕ್ಷಿಪಣಿ ದಾಳಿಯನ್ನು ಪಾಕಿಸ್ತಾನ ಮುಂದುವರಿಸಿತ್ತು. ಉರಿ, ಪೂಂಚ್, ಮೇಂಡಕ್, ಅಕ್ನೂರ್, ಉದಮ್‌ಪುರ ಬಳಿ ಕ್ಷಿಪಣಿ ಹಾಗೂ ಗುಂಡಿನ ದಾಳಿಯನ್ನು ಪಾಕಿಸ್ತಾನ ಸೇನೆ ನಡೆಸಿದೆ. ಇದರಲ್ಲಿ ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ. ಇದಕ್ಕೆ ಉತ್ತರವಾಗಿ ಭಾರತೀಯ ಸೇನೆಯೂ ತೀವ್ರ ದಾಳಿ ನಡೆಸಿದ ಪರಿಣಾಮ ಪಾಕಿಸ್ತಾನ ಸೇನೆ ತೀವ್ರ ಹಾನಿ ಅನುಭವಿಸಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.