ರಾಜನಾಥ ಸಿಂಗ್ ಅವರು ಶ್ರೀನಗರದಲ್ಲಿ ಸೇನೆಯ ಅಧಿಕಾರಿಯೊಬ್ಬರಿಗೆ ಸಿಹಿ ತಿನ್ನಿಸಿದರು
–ಪಿಟಿಐ ಚಿತ್ರ
ಶ್ರೀನಗರ: ‘ಪಾಕಿಸ್ತಾನದಂತಹ ಪುಂಡ ಮತ್ತು ಬೇಜವಾಬ್ದಾರಿ ರಾಷ್ಟ್ರದ ಕೈಯಲ್ಲಿ ಅಣ್ವಸ್ತ್ರಗಳು ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಆದ್ದರಿಂದ ಆ ರಾಷ್ಟ್ರದ ಅಣ್ವಸ್ತ್ರಗಳು ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯ (ಐಎಇಎ) ನಿಗಾದಲ್ಲಿರಬೇಕು’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಗುರುವಾರ ಆಗ್ರಹಿಸಿದ್ದಾರೆ.
‘ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆ ನಡೆಯದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಸಿದ ಕೆಲ ದಿನಗಳ ಬಳಿಕ ರಕ್ಷಣಾ ಸಚಿವರ ಹೇಳಿಕೆ ಹೊರಬಿದ್ದಿದೆ.
‘ಆಪರೇಷನ್ ಸಿಂಧೂರ’ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲ ಭೇಟಿ ನೀಡಿದ ರಾಜನಾಥ, ‘ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಯನ್ನು ಭಾರತವು ಕಡೆಗಣಿಸಿದೆ ಎಂಬ ಅಂಶವು, ಭಯೋತ್ಪಾದನೆಯ ವಿರುದ್ಧ ದೇಶದ ಸಂಕಲ್ಪ ಎಷ್ಟು ಪ್ರಬಲವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ’ ಎಂದರು.
‘ಪಾಕಿಸ್ತಾನವು ಎಷ್ಟೊಂದು ಬೇಜವಾಬ್ದಾರಿಯಿಂದ ಭಾರತಕ್ಕೆ ಹಲವಾರು ಬಾರಿ ಅಣ್ವಸ್ತ್ರ ದಾಳಿಯ ಬೆದರಿಕೆ ಹಾಕಿದೆ ಎಂಬುದನ್ನು ಇಡೀ ಜಗತ್ತು ನೋಡಿದೆ’ ಎಂದು ಅವರು ಸೈನಿಕರೊಂದಿಗೆ ಸಂವಾದದಲ್ಲಿ ಹೇಳಿದರು.
‘ಶ್ರೀನಗರದ ನೆಲದಿಂದ ನಾನು ಜಗತ್ತಿನೆದುರು ಒಂದು ಪ್ರಶ್ನೆಯನ್ನಿಡಲು ಬಯಸುತ್ತೇನೆ. ಅಂತಹ ಬೇಜವಾಬ್ದಾರಿ ಮತ್ತು ಪುಂಡ ರಾಷ್ಟ್ರದ ಕೈಯಲ್ಲಿ ಅಣ್ವಸ್ತ್ರಗಳು ಸುರಕ್ಷಿತವಾಗಿರಲಿವೆಯೇ?’ ಎಂದರು.
‘ಅಪರೇಷನ್ ಸಿಂಧೂರ’ವು ಭಾರತ ತನ್ನ ಇತಿಹಾಸದಲ್ಲಿ ಭಯೋತ್ಪಾದನೆಯ ವಿರುದ್ಧ ಕೈಗೊಂಡ ಅತಿದೊಡ್ಡ ಕಾರ್ಯಾಚರಣೆ ಎಂದು ರಕ್ಷಣಾ ಸಚಿವರು ಬಣ್ಣಿಸಿದರು.
‘ಕಳೆದ 35-40 ವರ್ಷಗಳಿಂದ ನಾವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದ್ದೇವೆ.
ಭಯೋತ್ಪಾದನೆಯ ವಿರುದ್ಧ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂಬುದನ್ನು ಭಾರತವು ಜಗತ್ತಿಗೆ ತೋರಿಸಿಕೊಟ್ಟಿದೆ’ ಎಂದು ಹೇಳಿದರು.
‘ಅವರು ನಮ್ಮ ಹಣೆಯ ಮೇಲೆ ದಾಳಿ ಮಾಡಿದರು. ನಾವು ಅವರ ಎದೆಯ ಮೇಲೆ ಗಾಯ ಮಾಡಿದ್ದೇವೆ. ಈಗ ಆಗಿರುವ ಗಾಯಗಳನ್ನು ಗುಣಪಡಿಸಲು ಪಾಕಿಸ್ತಾನದ ಮುಂದಿರುವ ಏಕೈಕ ಮಾರ್ಗವೆಂದರೆ, ಭಯೋತ್ಪಾದಕರಿಗೆ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವುದು ಆಗಿದೆ’ ಎಂದರು.
ವಿಕಿರಣ ಸೋರಿಕೆಯಾಗಿಲ್ಲ: ಎಐಇಎ
ನವದೆಹಲಿ: ಭಾರತದೊಂದಿಗೆ ಈಚೆಗೆ ನಡೆದ ಸೇನಾ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಯಾವುದೇ ಅಣು ಘಟಕದಿಂದ ವಿಕಿರಣ ಸೋರಿಕೆಯಾಗಿಲ್ಲ ಎಂದು ಎಐಇಎ ಹೇಳಿದೆ.
‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದ ಅಣು ಘಟಕಗಳನ್ನು ಗುರಿಯಾಗಿಸಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹಬ್ಬಿರುವ ಬೆನ್ನಲ್ಲೇ ಎಐಇಎ ಹೇಳಿಕೆ
ಬಂದಿದೆ.
‘ಐಎಇಎಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಪಾಕಿಸ್ತಾನದಲ್ಲಿ ಯಾವುದೇ ಅಣು ಘಟಕದಿಂದ ವಿಕಿರಣ ಸೋರಿಕೆ ಅಥವಾ ಬಿಡುಗಡೆಯಾಗಿಲ್ಲ’ ಎಂದು ಐಎಇಎ ವಕ್ತಾರರು ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮೂಲಕ ದೇಶದ ಜನರ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ನಡೆದಿದೆರಾಜನಾಥ ಸಿಂಗ್, ರಕ್ಷಣಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.