ADVERTISEMENT

ಆರ್.ಜಿ.ಕರ್ ಪ್ರಕರಣ | ಸರ್ಕಾರದ ವಿರುದ್ಧದ ಸಂಚಿಗೆ ಸಂತ್ರಸ್ತೆಯ ಪೋಷಕರ ಬಳಕೆ: TMC

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 2:50 IST
Last Updated 26 ಜನವರಿ 2025, 2:50 IST
<div class="paragraphs"><p>ಕೋಲ್ಕತ್ತದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಕೃತ್ಯ ಖಂಡಿಸಿ, ತರಬೇತಿನಿರತ ವೈದ್ಯರು ಪ್ರತಿಭಟನಾ ಜಾಥಾ ನಡೆಸಿದ್ದು (ಸಂಗ್ರಹ ಚಿತ್ರ)</p></div>

ಕೋಲ್ಕತ್ತದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಕೃತ್ಯ ಖಂಡಿಸಿ, ತರಬೇತಿನಿರತ ವೈದ್ಯರು ಪ್ರತಿಭಟನಾ ಜಾಥಾ ನಡೆಸಿದ್ದು (ಸಂಗ್ರಹ ಚಿತ್ರ)

   

–ಪಿಟಿಐ ಚಿತ್ರ

ಕೋಲ್ಕತ್ತ: ಆರ್‌.ಜಿ.ಕರ್‌ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ತರಬೇತಿನಿರತ ವೈದ್ಯೆಯ ಪೋಷಕರನ್ನು ಸರ್ಕಾರದ ವಿರುದ್ಧ ಪಿತೂರಿ ನಡೆಸಲು ಬಳಸಿಕೊಳ್ಳಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕ ಕುನಾಲ್‌ ಘೋಷ್‌ ಶನಿವಾರ ಆರೋಪಿಸಿದ್ದಾರೆ.

ADVERTISEMENT

ಪ್ರಕರಣದ ಸಾಕ್ಷ್ಯಗಳನ್ನು ನಾಶ ಮಾಡಲು ಪೊಲೀಸರು ಹಾಗೂ ಆಸ್ಪತ್ರೆಯ ಅಧಿಕಾರಿಗಳು ಪ್ರಯತ್ನಿಸಿದ್ದಾರೆ. ಆ ಹೊಣೆಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಾರಿಕೊಳ್ಳಲು ಸಾಧ್ಯವಿಲ್ಲ ಎಂದು ಸಂತ್ರಸ್ತೆಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರು ಹಾಗೂ ಆಸ್ಪತ್ರೆಯವರು ಪ್ರಕರಣದ ಹಿಂದೆ ಇರುವವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಎಲ್ಲ ಅಪರಾಧಿಗಳನ್ನು ಜೈಲಿಗಟ್ಟಲು ಸಿಬಿಐ ವಿಫಲವಾಗಿದೆ. ದೊಡ್ಡ ಪಿತೂರಿ ನಡೆದಿರುವುದನ್ನು ತನಿಖೆ ವೇಳೆ ಕಡೆಗಣಿಸಲಾಗಿದೆ ಎಂದು ದೂರಿದ್ದರು. ಇದರ ಬೆನ್ನಲ್ಲೇ, ಘೋಷ್‌ ಈ ಹೇಳಿಕೆ ನೀಡಿದ್ದಾರೆ.

'ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಮಾನಹಾನಿ, ಆರೋಪ ಮತ್ತು ಪಿತೂರಿಗಳನ್ನು ನಡೆಸಲು ಹಾಗೂ ಸಂತ್ರಸ್ತೆಗೆ ನ್ಯಾಯ ಒದಗಿಸುವ ಪ್ರಕ್ರಿಯೆಯನ್ನು ಹಾದಿ ತಪ್ಪಿಸಲು ಯತ್ನಿಸುತ್ತಿರುವ ಶಕ್ತಿಗಳು, ಹತ್ಯೆಯಾದ ವೈದ್ಯೆಯ ಪೋಷಕರನ್ನು ಬಳಸಿಕೊಳ್ಳುತ್ತಿವೆ' ಎಂದಿರುವ ಘೋಷ್‌, 'ದಯವಿಟ್ಟು ನೀವು ಅದಕ್ಕೆ ಅವಕಾಶ ಕೊಡಬೇಡಿ' ಎಂದು ಪೋಷಕರಿಗೆ ಮನವಿ ಮಾಡಿದ್ದಾರೆ.‌

'ಘೋರ ಕೃತ್ಯದ ಹಿಂದಿರುವ ಪ್ರಮುಖ ಅಪರಾಧಿಯನ್ನು ಗುರುತಿಸಿ, ಬಂಧಿಸಿದ್ದ ಕೋಲ್ಕತ್ತ ಪೊಲೀಸರನ್ನು ಒಮ್ಮೆ ಟೀಕಿಸಿದ್ದವರು, ನಂತರ, ಕಲ್ಕತ್ತಾ ಹೈಕೋರ್ಟ್‌ ಆದೇಶದಂತೆ ತನಿಖೆಯ ಹೊಣೆ ಹೊತ್ತ ಸಿಬಿಐ ಅನ್ನು ದೂರುತ್ತಿದ್ದಾರೆ' ಎಂದಿದ್ದಾರೆ.

ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಪೋಷಕರು, ಇದೀಗ, ಕೃತ್ಯದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಸ್ವಾತಂತ್ರ್ಯ ನೀಡಿರುವ ಹಾಗೂ ಅಪರಾಧಿಗೆ ಮರಣದಂಡನೆ ವಿಧಿಸಬೇಕು ಎಂದು ನ್ಯಾಯಾಲಯಕ್ಕೆ ಒತ್ತಾಯಿಸಿರುವ ಮುಖ್ಯಮಂತ್ರಿ ಅವರನ್ನು ಟೀಕಿಸುತ್ತಿದ್ದಾರೆ ಎಂದು ಘೋಷ್‌ ಬೇಸರ ವ್ಯಕ್ತಪಡಿಸಿದ್ದಾರೆ.

'ನಿಮ್ಮ (ಪೋಷಕರ) ನೋವು ಮತ್ತು ವೇದನೆ ನಮಗೆ ಅರ್ಥವಾಗುತ್ತದೆ. ನಾವು ನಿಮ್ಮೊಂದಿಗೆ ಇದ್ದೇವೆ' ಎಂದು ಪೋಷಕರಿಗೆ ಭರವಸೆ ನೀಡಿರುವ ಟಿಎಂಸಿ ನಾಯಕ, 'ಯಾವುದೇ ಪಟ್ಟಭದ್ರ ಹಿತಾಸಕ್ತಿಯುಳ್ಳವರು ನಿಮ್ಮನ್ನು ಬಳಸಿಕೊಳ್ಳಲು ಬಿಡಬೇಡಿ' ಎಂದು ಕೋರಿದ್ದಾರೆ.  

ದೋಷಿಗೆ ಜೀವಾವಧಿ
ವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ ಪ್ರಕರಣದಲ್ಲಿ ಸಂಜಯ್ ರಾಯ್‌ ದೋಷಿ ಎಂದು ತೀರ್ಪು ನೀಡಿದ್ದ ಸಿಯಾಲದಹದಲ್ಲಿರುವ ನ್ಯಾಯಾಲಯ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಳೆದ ವಾರ ಆದೇಶಿಸಿದೆ. ಆದರೆ, ಆತನಿಗೆ ಮರಣದಂಡನೆ ವಿಧಿಸಬೇಕು ಎಂಬ ಕೂಗು ಎದ್ದಿದೆ. ಸಿಬಿಐ ಸಹ ಕಲ್ಕತ್ತ ಹೈಕೋರ್ಟ್‌ ಮೆಟ್ಟಿಲೇರಿದ್ದು, ಗಲ್ಲು ಶಿಕ್ಷೆಗೆ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.