ADVERTISEMENT

'ಕ್ಷಮಿಸಿ ಮೋದಿಜೀ...' ಬಹಿರಂಗ ಪತ್ರದ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ದೀದಿ

ಏಜೆನ್ಸೀಸ್
Published 29 ಮೇ 2019, 10:27 IST
Last Updated 29 ಮೇ 2019, 10:27 IST
   

ಕೋಲ್ಕತ್ತಾ: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಿಸುವ ಸಮಾರಂಭಕ್ಕೆ ತೆರಳುವುದಾಗಿ ತಿಳಿಸಿದ್ದ ಮಮತಾ ಬ್ಯಾನರ್ಜಿ ಅವರು, ಬುಧವಾರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಘರ್ಷಕ್ಕೆ ಈ ವರೆಗೆ 54 ಮಂದಿ ಹತರಾಗಿದ್ದಾರೆ ಎಂದು ಬಿಜೆಪಿ ಇಂದು ಹೇಳಿತು. ಬಿಜೆಪಿಯ ಈ ವಾದದಿಂದ ಕೆರಳಿರುವ ಮಮತಾ ಬ್ಯಾನರ್ಜಿ, ಪ್ರಮಾಣ ವಚನ ಸಮಾರಂಭಕ್ಕೆ ತೆರಳದೇ ಇರಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ:ಮೋದಿ ಪ್ರಮಾಣಕ್ಕೆ ಮಮತಾ

ADVERTISEMENT

‘ಪ್ರಮಾಣ ವಚನ ಎಂಬುದು ಪ್ರಜಾಪ್ರಭುತ್ವದ ವೈಭವವನ್ನು ಸಂಭ್ರಮಿಸುವ ಕ್ಷಣ. ಅದನ್ನು ಯಾವುದೇ ರಾಜಕೀಯ ಪಕ್ಷ ರಾಜಕೀಯದ ಕಾರಣಗಳಿಗಾಗಿ ಬಳಸಿಕೊಂಡಿದ್ದೇ ಆದರೆಅದರ ಮೌಲ್ಯ ಕುಸಿಯುತ್ತದೆ,’ ಎಂಬ ಸಾಲಿನೊಂದಿಗೆ ಅವರು ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?

‘ನೂತನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವಂತೆ ಬಂದ ಸಂವಿಧಾನಿಕ ಆಮಂತ್ರಣವನ್ನು ಮನ್ನಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ನಾನು ನಿರ್ಧಾರ ಮಾಡಿದ್ದೆ. ಆದರೆ, ಈಗ್ಗೆ ಕೆಲ ಗಂಟೆಗಳ ಹಿಂದೆ ನಾನು ಮಾಧ್ಯಮ ವರದಿಯೊಂದನ್ನು ನೋಡಿದೆ. ‘ಪಶ್ಚಿಮ ಬಂಗಾಳದಲ್ಲಿ ರಾಜಕೀಯ ದಳ್ಳುರಿಗೆ 54 ಮಂದಿ ಹತರಾಗಿದ್ದಾರೆ,’ ಎಂದು ಬಿಜೆಪಿಹೇಳಿರುವ ವರದಿ ಅದಾಗಿತ್ತು.ಇದು ಸಂಪೂರ್ಣ ಸುಳ್ಳು. ಬಂಗಾಳದಲ್ಲಿ ಯಾವುದೇ ರಾಜಕೀಯ ಹತ್ಯೆಗಳು ನಡೆದಿಲ್ಲ. ಹಾಗೇನಾದರೂ ನಡೆದಿದ್ದರೆ ಅದು ವೈಯಕ್ತಿಯ ದ್ವೇಷ, ಕೌಟುಂಬಿಕ ಕಲಹ ಮತ್ತು ಇನ್ನಿತರೇ ಕಾರಣಗಳಿಂದ ಇರಬಹುದು. ಆದರೆ, ಸಾವುಗಳಿಗೆ ರಾಜಕೀಯದ ನಂಟಿಲ್ಲ. ನಮಗೆ ಅಂಥ ಸಾಕ್ಷ್ಯಗಳೂ ಇಲ್ಲ.ಆದ್ದರಿಂದ, ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಮೋದಿ ಅವರೇ. ಪ್ರಮಾಣ ವಚನದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲು ಸಾಧ್ಯವಿಲ್ಲ,’ ಎಂದು ಅವರು ಬರೆದುಕೊಂಡಿದ್ದಾರೆ.

ಮುಂದುವರಿದು, ‘ಪ್ರಮಾಣ ವಚನ ಎಂಬುದು ಪ್ರಜಾಪ್ರಭುತ್ವದ ವೈಭವವನ್ನು ಸಂಭ್ರಮಿಸು ಕ್ಷಣ. ಅದನ್ನು ಯಾವುದೇ ರಾಜಕೀಯ ಪಕ್ಷ ರಾಜಕೀಯದ ಕಾರಣಗಳಿಗಾಗಿ ಬಳಸಿಕೊಂಡರೆ, ಅದರ ಮೌಲ್ಯ ಕುಸಿಯುತ್ತದೆ,’ ಎಂದು ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರಕ್ಕೆ ಬಲಿಯಾದ ಬಿಜೆಪಿಯ ಕಾರ್ಯಕರ್ತರ ಕುಟುಂಬದವರನ್ನು ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ಆಹ್ವಾನಿಸಿದೆ. ಸುಮಾರು 50 ಮಂದಿಯನ್ನು ವಿಶೇಷ ಆಹ್ವಾನಿತರನ್ನಾಗಿ ಬಿಜೆಪಿ ಪರಿಗಣಿಸಿದೆ. ಇವರ ಕುಟುಂಬದವರು ಕಳೆದ 6 ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆ ಮತ್ತು ಇತ್ತೀಚಿನ ಲೋಕಸಭೆ ಚುನಾವಣೆ ಸಂದರ್ಭ ಸಂಭವಿಸಿದ ಹಿಂಸಾಚಾರಗಳಲ್ಲಿ ಮೃತಪಟ್ಟವರು ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ, ಇದನ್ನು ಮಮತಾ ಬ್ಯಾನರ್ಜಿ ಅವರು ನಿರಾಕರಿಸಿದ್ದಾರೆ. ಇದರ ವಿರುದ್ಧದ ಪ್ರತಿಭಟನೆಯಾಗಿ ಪ್ರಮಾಣವಚನ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.