ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ಮುಜಾಫರ್‌ಪುರ (ಬಿಹಾರ): 'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ನೀಡಿದ ಐದು ತಾಸಿನೊಳಗೆ ಪಾಕಿಸ್ತಾನ ವಿರುದ್ಧದ ಯುದ್ಧವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ನಿಲ್ಲಿಸಿದ್ದರು' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಬುಧವಾರ) ಆರೋಪಿಸಿದ್ದಾರೆ.
ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ 'ಮತದಾರರ ಅಧಿಕಾರ ಯಾತ್ರೆ'ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಮಾತನಾಡಿದ ರಾಹುಲ್, ಶ್ವೇತಭವನದಲ್ಲಿ ಟ್ರಂಪ್ ಅವರ ಅವರ ಭಾಷಣವನ್ನು ಉಲ್ಲೇಖಿಸಿದ್ದಾರೆ. 'ಟ್ರಂಪ್ ಇಂದು ಏನು ಹೇಳಿದ್ದಾರೆಂದು ನಿಮಗೆ ಗೊತ್ತೇ ? ಪಾಕಿಸ್ತಾನದೊಂದಿಗಿನ ಮಿಲಿಟರಿ ಸಂಘರ್ಷ ಮುಂದುವರಿದಾಗ ಪ್ರಧಾನಿ ಮೋದಿಗೆ ಕರೆ ಮಾಡಿ 24 ತಾಸಿನೊಳಗೆ ಯುದ್ಧ ನಿಲ್ಲಿಸುವಂತೆ ಸೂಚನೆ ನೀಡಿದ್ದರು ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ತಕ್ಷಣವೇ ಅದನ್ನು ಪಾಲಿಸಿದರು. ಮೋದಿ ಅವರಿಗೆ 24 ಗಂಟೆಗಳ ಕಾಲಾವಕಾಶ ನೀಡಲಾಯಿತು. ಆದರೆ ಕೇವಲ ಐದು ತಾಸಿನೊಳಗೆ ಯುದ್ಧ ನಿಲ್ಲಿಸಿದರು' ಎಂದು ರಾಹುಲ್ ಆರೋಪಿಸಿದ್ದಾರೆ.
ಪರಮಾಣು ಸಾಮರ್ಥ್ಯದ ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ನನ್ನ ಮಧ್ಯಸ್ಥಿಕೆಯಲ್ಲಿ ಕೊನೆಗೊಳಿಸಲಾಗಿತ್ತು ಎಂದು ಟ್ರಂಪ್ ಪದೇ ಪದೇ ಹೇಳಿಕೆ ನೀಡುತ್ತಲೇ ಇದ್ದಾರೆ.
ಆದರೆ ಮೂರನೇ ರಾಷ್ಟ್ರದ ಮಧ್ಯಪ್ರವೇಶವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಅಮೆರಿಕ ಅಥವಾ ಇತರೆ ಯಾವುದೇ ದೇಶದ ಮಧ್ಯಸ್ಥಿಕೆ ಇಲ್ಲದೆ ಭಾರತ ಹಾಗೂ ಪಾಕಿಸ್ತಾನ ಸೇನೆಗಳ ನಡುವಣ ನೇರ ಮಾತುಕತೆಯಲ್ಲಿ ಯುದ್ಧವನ್ನು ಕೊನೆಗೊಳಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿತ್ತು.
ಮತ್ತಷ್ಟು ಪುರಾವೆಗಳನ್ನು ಒದಗಿಸಲಿದ್ದೇನೆ...
ಬಿಜೆಪಿ ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪುರಾವೆಗಳನ್ನು ಒದಗಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಚುನಾವಣಾ ಆಯೋಗದ ನೆರವಿನಿಂದ ಬಿಜೆಪಿ ಮತ ಕಳ್ಳತನ ನಡೆಸುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.