ADVERTISEMENT

ಗಂಗಾ ನದಿ ಸ್ವಚ್ಛತೆ ಗ್ಯಾರಂಟಿ ಮರೆತ ಪ್ರಧಾನಿ ಮೋದಿ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 6 ಮಾರ್ಚ್ 2025, 11:01 IST
Last Updated 6 ಮಾರ್ಚ್ 2025, 11:01 IST
<div class="paragraphs"><p>ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ </p></div>

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ

   

–ಪಿಟಿಐ ಚಿತ್ರ

ನವದೆಹಲಿ: ಗಂಗಾ ನದಿ ಸ್ವಚ್ಛತೆಯ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ‘ಗಂಗಾ ಮಾತೆ’ಯನ್ನು ವಂಚಿಸಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ADVERTISEMENT

ಉತ್ತರಾಖಂಡ್‌ನ ಗಂಗಾ ಮಾತೆಯ ಚಳಿಗಾಲದ ಆವಾಸಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ ಮರುಕ್ಷಣವೇ ಮಲ್ಲಿಕಾರ್ಜುನ ಖರ್ಗೆ ಅವರು ‌‘ಎಕ್ಸ್‌’ನಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.

ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ದೇಗುಲ ಮಾರ್ಗದಲ್ಲಿರುವ ಮುಖ್ವಾ ದೇಗುಲದಲ್ಲಿ ಗುರುವಾರ ಬೆಳಗ್ಗೆ ಮೋದಿಯವರು ಪೂಜೆ ಸಲ್ಲಿಸಿದ್ದರು. ಗಂಗಾ ಮಾತೆಯ ಶ್ರದ್ಧಾ ಕೇಂದ್ರ ಗಂಗೋತ್ರಿ ದೇಗುಲದ ಮುಖ್ಯದ್ವಾರವನ್ನು ಚಳಿಗಾಲಕ್ಕೆ ಮುಚ್ಚಲಾಗುತ್ತದೆ. ಅದಕ್ಕೂ ಮುನ್ನ ಮುಖ್ವಾ ದೇಗುಲಕ್ಕೆ ಗಂಗಾ ಮಾತೆಯ ಮೂರ್ತಿಯನ್ನು ತಗೆದುಕೊಂಡು ಹೋಗಲಾಗುತ್ತದೆ.

ಮುಖ್ವಾ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಹರ್ಸಿಲ್‌ನಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ‘ನನ್ನನ್ನು ಗಂಗಾ ಮಾತೆ ದತ್ತು ಪಡೆದಿದ್ದಾಳೆ ಎನಿಸುತ್ತದೆ. ಆಕೆಯ ಆಶೀರ್ವಾದವೇ ನನ್ನನ್ನು ಕಾಶಿವರೆಗೂ ಕರೆತಂದಿತು. ಜನರ ಸೇವೆ ಮಾಡಲೂ ಅವಕಾಶ ಕಲ್ಪಿಸಿತು’ ಎಂದು ಹೇಳಿದ್ದರು.

ಮೋದಿ ಪ್ರಾರ್ಥನೆ ಬಗ್ಗೆ ‘ಎಕ್ಸ್‘ನಲ್ಲಿ ಟೀಕಿಸಿರುವ ಖರ್ಗೆ ‘ಗಂಗಾ ಮಾತೆಯೇ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದು ಮೋದಿ ಹೇಳಿದ್ದಾರೆ. ಆದರೆ ವಾಸ್ತವ ಏನೆಂದರೆ ಗಂಗಾ ನದಿಯನ್ನು ಸ್ವಚ್ಛಗೊಳಿಸುವ ತನ್ನ ಗ್ಯಾರಂಟಿಯನ್ನೇ ಮೋದಿ ಮರೆತಿದ್ದಾರೆ’ ಎಂದು ಟೀಕಿಸಿದರು.

‘ನಮಾಮಿ ಗಂಗೆ’ ಯೋಜನೆ ವಿಫಲ:
11 ವರ್ಷದ ಹಿಂದೆ ‘ನಮಾಮಿ ಗಂಗೆ’ ಯೋಜನೆ ಆರಂಭಿಸಿ ಮಾರ್ಚ್‌ 2026ರ ವೇಳೆಗೆ ₹ 42500 ಕೋಟಿ ಬಳಕೆ ಮಾಡಲಾಗುವುದು ಎಂದು ಮೋದಿ ಹೇಳಿದ್ದರು. ಆದರೆ ಸದನದಲ್ಲೇ ಪ್ರಶ್ನೆಯೊಂದಕ್ಕೆ ಕೊಟ್ಟ ಉತ್ತರದಲ್ಲಿ 2024ರ ಡಿಸೆಂಬರ್‌ವರೆಗೆ ಕೇವಲ ₹ 19271 ಕೋಟಿ ಮಾತ್ರ ಬಳಸಲಾಗಿದೆ ಎಂದು ತಿಳಿಸಲಾಗಿದೆ. ‘ನಮಾಮಿ ಗಂಗೆ’ ನಿಧಿಯಲ್ಲಿ ಶೇ 55ರಷ್ಟು ಹಣವನ್ನೂ ಖರ್ಚು ಮಾಡಿಲ್ಲ. ಗಂಗಾ ಮಾತೆ ಬಗ್ಗೆ ಇಷ್ಟೊಂದು ತಾರತಮ್ಯ ಏಕೆ ಎಂದು ಖರ್ಗೆ ಪ್ರಶ್ನಿಸಿದರು.
ಮಲಿನಗೊಳ್ಳುತ್ತಿರುವ ಗಂಗೆ:
ಉತ್ತರ ಪ್ರದೇಶವೊಂದೇ 3513 ಎಂಎಲ್‌ಡಿ ಕೊಳಚೆ ನೀರನ್ನು ಗಂಗಾ ನದಿಗೆ ಬಿಡುತ್ತಿದೆ. ಶೇ 97ರಷ್ಟು ಎಸ್‌ಟಿಪಿಗಳು ( ತ್ಯಾಜ್ಯ ಸಂಸ್ಕರಣಾ ಘಟಕ) ನಿಯಮ ಪಾಲಿಸುತ್ತಿಲ್ಲ.  2024ರಲ್ಲೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ವಾರಾಣಸಿಯಲ್ಲಿ ಗಂಗಾ ನದಿಯ ಸ್ವಚ್ಛತೆ ಕಾಪಾಡದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಸ್ನಾನ ಮಾಡಲೂ ಗಂಗಾ ನದಿ ನೀರು ಯೋಗ್ಯವಲ್ಲ ಎಂದಿತ್ತು. 2025ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಬಿಡುಗಡೆ ಮಾಡಿದ ವರದಿಯಲ್ಲೇ ಗಂಗಾ ನದಿ ನೀರಿನಲ್ಲಿ ಫೀಕಲ್ ಕಾಲಿಫಾರ್ಮಾ ಪ್ರಮಾಣ ಸುರಕ್ಷತಾ ಮಟ್ಟಕ್ಕಿಂತ ಹೆಚ್ಚಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.  ನದಿಗೆ ಸೇರುತ್ತಿರುವ ಘನತ್ಯಾಜ್ಯ ಹೆಚ್ಚುತ್ತಿದೆ. ಇದರಿಂದ ನದಿ ನೀರಿನ ಪಾರದರ್ಶಕತೆಯೂ ಶೇ 5ಕ್ಕೆ ಕುಸಿದಿದೆ. ಗಂಗಾ ನದಿಯ ಪ್ಲಾಸ್ಟಿಕ್‌ ಮಾಲಿನ್ಯ ಶೇ 25ರಷ್ಟು ಹೆಚ್ಚಿದೆ.  ಗಂಗಾ ಗ್ರಾಮದ ಹೆಸರಲ್ಲಿ ಮೋದಿ ಸರ್ಕಾರ ಶೌಚಾಲಯಗಳನ್ನು ಮಾತ್ರ ನಿರ್ಮಿಸಿತು. ಐದು ರಾಜ್ಯಗಳಲ್ಲಿ ಗಂಗಾ ನದಿಯ ಆಜುಬಾಜು ₹2294 ಕೋಟಿ ವೆಚ್ಚದಲ್ಲಿ 134106 ಹೆಕ್ಟೇರ್‌ ಅರಣ್ಯೀಕರಣ ಯೋಜನೆ ರೂಪಿಸಿದ್ದರೂ ಶೇ 78ರಷ್ಟು ಅರಣ್ಯೀಕರಣ ಆಗಿಲ್ಲ. ‘ಗಂಗೆ ಜೀವ ನದಿ. ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಆದರೆ ಮೋದಿ ಸರ್ಕಾರ ಸ್ವಚ್ಛತೆಯ ಹೆಸರಿನಲ್ಲಿ ಗಂಗಾ ಮಾತೆಯನ್ನು ವಂಚಿಸುತ್ತಿದೆ’ ಎಂದು ಖರ್ಗೆ ಟೀಕಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.