ನರೇಂದ್ರ ಮೋದಿ
(ಪಿಟಿಐ ಚಿತ್ರ)
ಗಾಂಧಿನಗರ (ಗುಜರಾತ್): '1947ರಲ್ಲಿ ಕಾಶ್ಮೀರಕ್ಕೆ ನುಗ್ಗಿದ ಮುಜಾಹಿದ್ದೀನ್‌ಗಳನ್ನು ಕೊಂದಿದ್ದರೆ ಈಗ ನಾವು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರಲಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಇಂದು (ಮಂಗಳವಾರ) ಹೇಳಿದ್ದಾರೆ.
ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಮತ್ತೊಮ್ಮೆ ಪಾಕ್‌ನ ಗಡಿಯಾಚೆಗಿನ ಭಯೋತ್ಪಾದನೆ ಹಾಗೂ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಕುರಿತು ಪ್ರಸ್ತಾಪಿಸಿದ್ದಾರೆ.
'1947ರಲ್ಲಿ ವಿಭಜನೆಯಾದಾಗ ದೇಶವು ಮೂರು ಭಾಗಗಳಾಗಿ ವಿಂಗಡಣೆಯಾಗಿತ್ತು. ಕಾಶ್ಮೀರದಲ್ಲಿ ಮೊದಲ ಭಯೋತ್ಪಾದಕ ದಾಳಿ ವರದಿಯಾದ ಬೆನ್ನಲ್ಲೇ ಪಾಕಿಸ್ತಾನ, ಕಾಶ್ಮೀರದ ಒಂದು ಭಾಗವನ್ನು ಆಕ್ರಮಿಸಿಕೊಂಡಿತ್ತು' ಎಂದು ಹೇಳಿದ್ದಾರೆ.
'ಒಂದು ವೇಳೆ ಮುಜಾಹಿದ್ದೀನ್‌ಗಳನ್ನು ಕೊಂದಿದ್ದರೆ ಈ ಸ್ಥಿತಿ ಎದುರಾಗುತ್ತಿರಲಿಲ್ಲ. 1947ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವಂತೆ ಬಯಸಿದ್ದರು. ಪಿಒಕೆ ಮರಳಿ ಪಡೆಯುವವರೆಗೂ ಸೇನೆ ಕಾರ್ಯಾಚರಣೆ ನಿಲ್ಲಿಸಬಾರದು ಎಂದು ಅವರು ಬಯಸಿದ್ದರು' ಎಂದು ಮೋದಿ ಉಲ್ಲೇಖಿಸಿದ್ದಾರೆ.
'75 ವರ್ಷಗಳಿಂದ ನಾವು ತೊಂದರೆಯನ್ನು ಎದುರಿಸುತ್ತಿದ್ದೇವೆ. ಪಹಲ್ಗಾಮ್‌ನಲ್ಲಿ ನಡೆದಿದ್ದು ಆ ದಾಳಿಯ ವಿಕೃತ ರೂಪವಾಗಿತ್ತು. ಪ್ರತಿ ಸಲವೂ ಪಾಕಿಸ್ತಾನವನ್ನು ಭಾರತೀಯ ಸೇನೆ ಸದೆಬಡಿದಿದೆ. ಭಾರತವನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದು ಪಾಕ್‌ಗೆ ಮನವರಿಕೆಯಾಗಿದೆ' ಎಂದು ಅವರು ಹೇಳಿದ್ದಾರೆ.
'ಭಯೋತ್ಪಾದನೆ ಪರೋಕ್ಷ ಯುದ್ಧವಲ್ಲ. ಇದು ಪಾಕ್‌ನ ಯುದ್ಧ ತಂತ್ರವಾಗಿದೆ. ಪಾಕ್‌ನಿಂದ ಯೋಜಿತ ದಾಳಿ ನಡೆದಿತ್ತು. ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದೇವೆ' ಎಂದು ಹೇಳಿದ್ದಾರೆ.
'1960ರ ಸಿಂಧೂ ನದಿ ಜಲ ಒಪ್ಪಂದವನ್ನು ಕೆಟ್ಟದಾಗಿ ಸಂಧಾನ ಮಾಡಲಾಗಿತ್ತು. ಕಾಶ್ಮೀರದಲ್ಲಿ ಅಣೆಕಟ್ಟುಗಳ ಹೂಳು ತೆಗೆಯುವುದನ್ನು ನಿಷೇಧಿಸುವ ನಿಬಂಧನೆಯನ್ನು ಇದು ಹೊಂದಿತ್ತು' ಎಂದು ಅವರು ಹೇಳಿದ್ದಾರೆ.
'ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸಲಾಗಿದೆ. ನಾವು ಅಣೆಕಟ್ಟಿನ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಾರಂಭಿಸಿದ್ದೇವೆ. ಆಗಲೇ ಪಾಕ್‌ಗೆ ಬಿಸಿ ಮುಟ್ಟಲು ಪ್ರಾರಂಭವಾಗಿದೆ. ಗೇಟ್ ಸ್ವಲ್ಪ ಮಾತ್ರ ತೆರೆದುಕೊಂಡಾಗ ಪಾಕ್‌ನಲ್ಲಿ ಪ್ರವಾಹ ಸೃಷ್ಟಿಯಾಯಿತು' ಎಂದು ಅವರು ಹೇಳಿದ್ದಾರೆ.
'ಭಾರತ ಈಗ ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. 2014ರಲ್ಲಿ ನಾನು ಪ್ರಧಾನಿಯಾದಾಗ ನಮ್ಮ ಸ್ಥಾನ 11ರಲ್ಲಿತ್ತು. ನಾವು ಅಭಿವೃದ್ಧಿ ಕಾರ್ಯಗಳಲ್ಲಿ ನಿರತರಾಗಿದ್ದೇವೆ' ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.