ADVERTISEMENT

ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಚಿತ್ರ; ದೂರು ಸಲ್ಲಿಸಿದ ಟಿಎಂಸಿ

ಸೌಮ್ಯ ದಾಸ್
Published 4 ಮಾರ್ಚ್ 2021, 1:21 IST
Last Updated 4 ಮಾರ್ಚ್ 2021, 1:21 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಕೋಲ್ಕತ್ತ: ಕೋವಿಡ್-19 ವ್ಯಾಕ್ಸಿನೇಷನ್ ಪ್ರಮಾಣಪತ್ರ ಮತ್ತು ಕೇಂದ್ರ ಯೋಜನೆಗಳ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರವನ್ನು ಲಗತ್ತಿಸಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಚುನಾವಣಾ ಆಯೋಗಕ್ಕೆ (ಇಸಿ) ದೂರು ಸಲ್ಲಿಸಿದೆ.

ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್ ನೇತೃತ್ವದ ಟಿಎಂಸಿ ನಿಯೋಗವು ಕೋಲ್ಕತ್ತದಲ್ಲಿ ಇಸಿ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದು, ಕ್ರಮಕ್ಕೆ ಆಗ್ರಹಿಸಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯ ಪ್ರಚಾರಕರಾಗಿರುವ ಪ್ರಧಾನ ಮಂತ್ರಿಗಳ ಚಿತ್ರವನ್ನು ಕೋವಿಡ್-19 ವ್ಯಾಕ್ಸಿನೇಷನ್ ಪ್ರಮಾಣಪತ್ರ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಜಾಹೀರಾತು ಫಲಕಗಳನ್ನು ಲಗತ್ತಿಸಿರುವುದು ಸರ್ಕಾರಿ ವ್ಯವಸ್ಥೆಯ ಉಲ್ಲಂಘನೆಯಾಗಿದೆ ಎಂದು ಹಕೀಮ್ ದೂರಿದರು.

ADVERTISEMENT

ಪ್ರಧಾನಿಯವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರ ಮತಯಾಚಿಸುತ್ತಿದ್ದಾರೆ. ಹಾಗಿರುವಾಗ ಕೋವಿಡ್-19 ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಚಿತ್ರವನ್ನು ಅಂಟಿಸಿ ಪ್ರಧಾನಿ ಮೋದಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ಮಧ್ಯೆ ಪ್ರವೇಶಿಸಿ ಪೆಟ್ರೋಲ್ ಪಂಪ್ ಹಾಗೂ ಇತರೆ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಜಾಹೀರಾತು ಫಲಕವನ್ನು ತೆಗೆಯುವಂತೆ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

ತೃಣಮೂಲ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿರುವ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಮತದಾನ ದಿನಾಂಕ ಪ್ರಕಟಿಸುವ ಮೊದಲೇ ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭಿಸಲಾಗಿತ್ತು. ಅಲ್ಲದೆ ಕೇಂದ್ರ ಸರ್ಕಾರದ ಯೋಜನೆಗಳ ಜಾಹೀರಾತು ಫಲಕವನ್ನು ಖಾಸಗಿ ಜಾಗಗಳಲ್ಲಿ ಮಾತ್ರ ಸ್ಥಾಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.