ADVERTISEMENT

ರೈತರು, ಕುಶಲಕರ್ಮಿಗಳಿಗೆ ಸಹಾಯ ಮಾಡಲು ವಿಶ್ವ ಭಾರತಿಗೆ ಪ್ರಧಾನಿ ಮೋದಿ ಕರೆ

ಪಿಟಿಐ
Published 19 ಫೆಬ್ರುವರಿ 2021, 8:36 IST
Last Updated 19 ಫೆಬ್ರುವರಿ 2021, 8:36 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ವಿಶ್ವ ಭಾರತಿ (ಪ. ಬಂಗಾಳ): ಹಳ್ಳಿಗಳಲ್ಲಿರುವ ರೈತರು ಹಾಗೂ ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಹುಡುಕಲು ವಿಶ್ವ ಭಾರತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೆರವಾಗಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಕರೆ ನೀಡಿದ್ದಾರೆ.

ವಿಶ್ವ ಭಾರತಿ ಪರಂಪರೆಯನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಗುರು ರವೀಂದ್ರನಾಥ ಟಾಗೋರ್ ವಿಶ್ವ ವಿದ್ಯಾಲಯವನ್ನು ಶಿಕ್ಷಣ ಸಂಸ್ಥೆಯಾಗಿ ಮಾತ್ರವೇ ಪರಿಗಣಿಸಿರಲಿಲ್ಲ. ಭಾರತದ ಸಂಸ್ಕೃತಿಯು ತನ್ನ ಪೂರ್ಣ ಸಾಮರ್ಥ್ಯವನ್ನು ಅರಿಯಲು ಸಹಕಾರಿಯಾಗಲಿ ಎಂದು ಇಚ್ಛಿಸಿದ್ದರು ಎಂದುತಿಳಿಸಿದರು.

ದೇಶದ ಅತಿ ಹಳೆಯ ಕೇಂದ್ರ ವಿಶ್ವವಿದ್ಯಾಲಯವಾದ ವಿಶ್ವ ಭಾರತಿ ಪದವಿ ಪ್ರಧಾನ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜ್ಞಾನವೆಂಬುದು ಸ್ಥಿರ ಹಾಗೂ ಜಡತ್ವವಾಗಿರುವುದಿಲ್ಲ ಬದಲಿಗೆ ಅದೊಂದು ಕ್ರಿಯಾತ್ಮಕ ಪರಿಕಲ್ಪನೆಯಾಗಿರುತ್ತದೆ ಎಂಬ ಸಂದೇಶ ನೀಡಿದರು.

ADVERTISEMENT

ಈ ಪ್ರೇರಣಾದಾಯಕ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ರೈತರು ಹಾಗೂ ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಂಡುಹಿಡಿಯಲು ಸಹಾಯ ಮಾಡುವಂತೆ ನಾನು ಕೋರುತ್ತೇನೆ. ಇದು ಸ್ವಾವಲಂಬಿ (ಆತ್ಮನಿರ್ಭರ್) ಭಾರತ ನಿರ್ಮಾಣದ ಹೆಜ್ಜೆಯಾಗಿರಲಿದೆ ಎಂದು ಹೇಳಿದರು.

ನಿಮ್ಮ ಜ್ಞಾನ ಹಾಗೂ ಕೌಶಲ್ಯವು ಇಡೀ ಸಮಾಜವನ್ನು ಹೆಮ್ಮೆಪಟ್ಟುಕೊಳ್ಳುವಂತೆ ಮಾಡುತ್ತದೆ. ಅದು ವಿನಾಶದ ಕತ್ತಲೆಯನ್ನು ಹೋಗಲಾಡಿಸಲಿದೆ. ಈ ಬಗ್ಗೆ ಇತಿಹಾಸ ಹಾಗೂ ವರ್ತಮಾನದಲ್ಲಿ ಅನೇಕ ಉದಾಹರಣೆಗಳಿವೆ ಎಂದು ಹೇಳಿದರು.

ಜಗತ್ತಿನಲ್ಲಿ ಭಯೋತ್ಪಾದನೆ ಹಾಗೂ ಹಿಂಸಾಚಾರವನ್ನು ಹರಡುತ್ತಿರುವವರಲ್ಲಿ ಕೆಲವು ಉನ್ನತ್ತ ವಿದ್ಯಾವಂತರು ಹಾಗೂ ನುರಿತ ಜನರನ್ನು ನೀವು ಕಾಣಬಹುದು. ಇನ್ನೊಂದೆಡೆ ಇನ್ನು ಕೆಲವರು ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ಜನರನ್ನು ಮುಕ್ತಗೊಳಿಸಲು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಹಾಗಾಗಿ ಉತ್ತಮ ಮನೋಸ್ಥಿತಿ ಅತ್ಯಂತ ಮುಖ್ಯವಾದುದು ಎಂದು ಪ್ರತಿಪಾದಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ಸಂಶೋಧನೆ ಹಾಗೂ ನಾವೀನ್ಯತೆಗೆ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.

ಆತ್ಮ ವಿಶ್ವಾಸಭರಿತ ಹೆಣ್ಣು ಮಕ್ಕಳಿಲ್ಲದೆ ಭಾರತವು ಸ್ವಾವಲಂಬಿಯಾಗಲು ಸಾಧ್ಯವಿಲ್ಲ. ಹಾಗೆಯೇ ವೈಫಲ್ಯಗಳ ಭಯವಿಲ್ಲದೆ ಸವಾಲುಗಳನ್ನು ಸ್ವೀಕರಿಸುವಂತೆ ಯುವಜನತೆಗೆ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.