ಅಹಮದಾಬಾದ್: ಗುಜರಾತ್‌ನ ಜಾಮಾನಗರದಲ್ಲಿ ಉದ್ಯಮಿ ಅನಂತ್ ಅಂಬಾನಿ ಸ್ಥಾಪಿಸಿರುವ ಅತ್ಯಾಧುನಿಕ ಪ್ರಾಣಿ ಸಂರಕ್ಷಣೆ ಮತ್ತು ಪುನರ್ವಸತಿ ಸಂಸ್ಥೆಯಾದ ‘ವಂತಾರಾ’ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
‘ವಂತಾರಾ’ ಕೇಂದ್ರವು 2,000ಕ್ಕೂ ಹೆಚ್ಚು ವಿವಿಧ ಜಾತಿಗಳ ವನ್ಯಜೀವಿಗಳಿಗೆ ನೆಲೆಯಾಗಿದೆ. ವಿಶ್ವದಾದ್ಯಂತ 1.5 ಲಕ್ಷಕ್ಕೂ ಹೆಚ್ಚು ರಕ್ಷಿಸಲ್ಪಟ್ಟ, ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಪೋಷಣೆ ಮಾಡುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ರಿಲಯನ್ಸ್ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಧಾನಿ ಮೋದಿ ಅವರು ಸಿಂಹದ ಮರಿಗಳು, ಒಕಾಪಿ, ಚಿಂಪಾಂಜಿ, ಒರಾಂಗುಟಾನ್, ಜಿರಾಫೆ, ಮೀನು, ಆನೆಗಳು ಸೇರಿದಂತೆ ಇತರ ವನ್ಯಜೀವಿಗಳಿಗೆ ಆಹಾರವನ್ನು ನೀಡುತ್ತಿರುವ ವಿಡಿಯೊವನ್ನು ರಿಲಯನ್ಸ್ ಕಂಪನಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.
3,500 ಎಕರೆ ಜಾಗವನ್ನು ಚೀತಾಗಳಿಗಾಗಿ ಕಾಯ್ದಿರಿಸಲಾಗಿದೆ. ಇದು ವಿಶ್ವದ ಅತಿದೊಡ್ಡ ಚೀತಾ ಸಂರಕ್ಷಣಾ ಯೋಜನೆ ಎಂದು ರಿಲಯನ್ಸ್ ಹೇಳಿಕೊಂಡಿದೆ.
ಪ್ರಧಾನಿ ಮೋದಿ ಅವರೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.