ಯುವಜನರ ಶಿಕ್ಷಣ ಮತ್ತು ಕೌಶಲಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು
–ಪಿಟಿಐ ಚಿತ್ರ
ನವದೆಹಲಿ: ಬಿಹಾರದ ಜನರು ಬೃಹತ್ ಪ್ರಮಾಣದಲ್ಲಿ ವಲಸೆ ಹೋಗಲು ಆರ್‌ಜೆಡಿ ಆಡಳಿತ ಅವಧಿಯಲ್ಲಿದ್ದ ಕಳಪೆ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಟೀಕಿಸಿದರು.
ಯುವ ಸಮುದಾಯಕ್ಕಾಗಿ ಶಿಕ್ಷಣ ಮತ್ತು ಕೌಶಲ ಕಾರ್ಯಕ್ರಮಗಳು ಸೇರಿದಂತೆ ₹62 ಸಾವಿರ ಕೋಟಿ ಮೊತ್ತದ ಹಲವಾರು ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಸುಧಾರಣೆಯನ್ನು ತರುವ ಮೂಲಕ ಬಿಹಾರವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿದೆ’ ಎಂದರು.
'ವಿರೋಧಪಕ್ಷಗಳ ದುರಾಡಳಿತದಿಂದ ಬಿಹಾರದ ವ್ಯವಸ್ಥೆಯ ಹಾಳಾಗಿದೆ. ಹಳಿ ತಪ್ಪಿರುವ ವ್ಯವಸ್ಥೆಯನ್ನು ಸರಿಪಡಿಸಲು ನಿತೀಶ್ ಅವರ ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.
ಕೇಂದ್ರ ಸರ್ಕಾರ ಪ್ರಾಯೋಜಕತ್ವದ ₹60 ಸಾವಿರ ಕೋಟಿ ಹೂಡಿಕೆಯ ‘ಪಿ.ಎಂ ಸೇತು’ ಯೋಜನೆಗೂ ಚಾಲನೆ ನೀಡಿದ ಮೋದಿ ‘ಪ್ರಸ್ತುತ ಕೈಗಾರಿಕಾ ತರಬೇತಿ ಕೇಂದ್ರಗಳು (ಐಟಿಐ) ಕೇವಲ ಕೈಗಾರಿಕಾ ತರಬೇತಿಗೆ ಸೀಮಿತವಾಗಿಲ್ಲ ಬದಲಾಗಿ ಆತ್ಮನಿರ್ಭರ ಭಾರತವನ್ನು ಕಲಿಸುವ ಕೇಂದ್ರವಾಗಿದೆ. 2014ರವರೆಗೆ ದೇಶದಲ್ಲಿ ಕೇವಲ 10 ಸಾವಿರ ಐಟಿಐಗಳಿದ್ದವು, ಕಳೆದ ದಶಕದಲ್ಲಿ 5 ಸಾವಿರ ಹೊಸ ಐಟಿಐಗಳನ್ನು ಆರಂಭಿಸಲಾಗಿದೆ’ ಎಂದರು.
ಚುನಾವಣೆಯನ್ನು ಎದುರು ನೋಡುತ್ತಿರುವ ಬಿಹಾರದಲ್ಲಿ, ಜನನಾಯಕ ಕರ್ಪೂರಿ ಠಾಕೂರ್ ಕೌಶಲ ವಿಶ್ವವಿದ್ಯಾಲಯ ಲೋಕಾರ್ಪಣೆ, ಬಿಹಾರದ ನಾಲ್ಕು ಸಾವಿರರಕ್ಕೂ ಅಧಿಕ ಜನರಿಗೆ ಉದ್ಯೋಗ ನೇಮಕಾತಿ ಪತ್ರ ವಿತರಣೆ, ಮುಖ್ಯಮಂತ್ರಿ ಬಾಲಕ– ಬಾಲಿಕಾ ವಿದ್ಯಾರ್ಥಿವೇತನ ಯೋಜನೆಯಡಿ ಬಿಹಾರದ 25 ಲಕ್ಷ ವಿದ್ಯಾರ್ಥಿಗಳಿಗೆ ಒಟ್ಟು ₹450 ಕೋಟಿ ವಿದ್ಯಾರ್ಥಿವೇತನ ಬಿಡುಗಡೆ ಮತ್ತು ಪಟ್ನಾದಲ್ಲಿ ನೂತನ ಎನ್‌ಐಟಿ ಕ್ಯಾಂಪಸ್ ಲೋಕಾರ್ಪಣೆಯನ್ನೂ ಪ್ರಧಾನಿ ಮೋದಿ ನೆರವೇರಿಸಿದರು.
‘ಸಾಮಾಜಿಕ ಜಾಲತಾಣದಿಂದ ಜನನಾಯಕ ಎನಿಸಿಕೊಂಡವರಲ್ಲ’
ಹಿಂದುಳಿದ ವರ್ಗಗಳ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗಿರುವ ಜನನಾಯಕ ಎಂಬ ಬಿರುದನ್ನು ಕಸಿಯಲು ನಡೆಯತ್ತಿರುವ ಪ್ರಯತ್ನಗಳ ಬಗ್ಗೆ ಬಿಹಾರದ ಜನರು ಜಾಗರೂಕರಾಗಿರಬೇಕು ಎಂದು ಪ್ರಧಾನಿ ಮೋದಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ‘ಸಾಮಾಜಿಕ ಜಾಲತಾಣಗಳ ಟ್ರೋಲ್‌ಗಳ ಮೂಲಕ ಕರ್ಪೂರಿ ಅವರಿಗೆ ಜನನಾಯಕ ಎಂಬ ಬಿರುದು ದೊರಕಿಲ್ಲ ಬದಲಾಗಿ ಜನರಿಗೆ ಅವರ ಮೇಲಿದ್ದ ಪ್ರೀತಿಯ ಪ್ರತಿಬಿಂಬವಾಗಿ ಆ ಬಿರುದು ಲಭಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.