ADVERTISEMENT

ಮೆಹಬೂಬಾ ಮುಫ್ತಿ ಆಪ್ತ ವಹೀದ್ ಪಾಕ್ ಉಗ್ರ ಸಂಘಟನೆಗಳ ಸ್ವತ್ತು: ಪೊಲೀಸ್

ಪಿಟಿಐ
Published 6 ಜೂನ್ 2021, 13:50 IST
Last Updated 6 ಜೂನ್ 2021, 13:50 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ಶ್ರೀನಗರ: ಪಿಡಿಪಿಯ ಹಿರಿಯ ನಾಯಕ, ಜಮ್ಮು–ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆಪ್ತ ವಹೀದ್ ಉರ್ ರೆಹಮಾನ್ ಪರಾ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಸ್ವತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

2007ರಿಂದ ಪತ್ರಕರ್ತ ಮತ್ತು ರಾಜಕಾರಣಿಯಾಗಿ ವಹೀದ್ ಅವರ 13 ವರ್ಷಗಳ ಪ್ರಯಾಣವು ‘ಕುತಂತ್ರ, ವಂಚನೆ ಮತ್ತು ದ್ವಿಮುಖ ವ್ಯವಹಾರ’ದ ಕಥೆಯಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ರಾಜಕೀಯ ಲಾಭಕ್ಕಾಗಿ ಉಗ್ರ ಸಂಘಟನೆಗಳ ಬೆಂಬಲ ಪಡೆಯುತ್ತಿದ್ದ ವಹೀದ್, ಇದಕ್ಕೆ ಪ್ರತಿಯಾಗಿ ಭಯೋತ್ಪಾದಕ ದಾಳಿ ನಡೆಸುವವರಿಗೆ ನೆರವಾಗಿದ್ದರು ಎಂಬ ಆರೋಪ ಇದೆ.

ಐದು ಸಾಕ್ಷ್ಯಗಳ ಸಹಾಯದಿಂದ ಜಮ್ಮು–ಕಾಶ್ಮೀರದ ಸಿಐಡಿಯ ಅಂಗಸಂಸ್ಥೆಯಾದ ‘ಕ್ರಿಮಿನಲ್ ಇನ್‌ವೆಸ್ಟಿಗೇಷನ್ ಕಾಶ್ಮೀರ್‌ (ಸಿಐಕೆ)’ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಚಾರ್ಜ್‌ಶೀಟ್ ಸಲ್ಲಿಸಿದೆ.

ರಾಜಕೀಯ ಪ್ರತಿಸ್ಪರ್ಧಿಗಳನ್ನು ಹತ್ಯೆ ಮಾಡಲು ಮತ್ತು ಪಕ್ಷದ ನಾಯಕರಿಗೆ ಚುನಾವಣಾ ರಾಜಕೀಯದಲ್ಲಿ ನೆರವಾಗಲು ಉಗ್ರ ಸಂಘಟನೆಗಳಿಗೆ ವಹೀದ್ ಹಣ ಪಾವತಿಸಿರುವ ಬಗ್ಗೆಯೂ 19 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ವಹೀದ್ ಪರ ವಕೀಲರು ನ್ಯಾಯಾಲಯ ಕಲಾಪಗಳ ಸಂದರ್ಭ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ವಹೀದ್ ವಿರುದ್ಧ ರಾಜಕೀಯ ಪ್ರೇರಿತವಾಗಿ ಇಂಥ ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದ, ಪಾಕ್ ನಂಟು ಹೊಂದಿದ್ದ ಅಬು ದುಜಾನಾ ಜತೆ ವಹೀದ್‌ಗೆ ನಂಟಿತ್ತು. ಆತನನ್ನು ವಹೀದ್ ಹಲವು ಬಾರಿ ಭೇಟಿಯಾಗಿದ್ದರು. ದುಜಾನಾ ಜತೆ ಹುಡುಗಿಯೊಬ್ಬಳ ಬಲವಂತದ ಮದುವೆ ನಡೆದಿದ್ದರ ಹಿಂದೆ ವಹೀದ್ ಕೃಪೆ ಇತ್ತು ಎಂದೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

2007ರಲ್ಲಿ ವಹೀದ್ ಪಾಕಿಸ್ಥಾನಕ್ಕೆ ತೆರಳಿ ನಿಷೇಧಿತ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ಸಂದರ್ಶನ ನಡೆಸಿದ್ದರು. ಅದು ಪುಲ್ವಾಮಾದ ಸ್ಥಳೀಯ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಅಲ್ಲಿಂದ ನಂತರದ ವಹೀದ್ ಅವರ ಎಲ್ಲ ಚಟುವಟಿಕೆಗಳ ಜಾಡು ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಹೀದ್ 2013ರಲ್ಲಿ ಪಿಡಿಪಿ ಸೇರಿದ್ದರು. ಭಾರತ–ಪಾಕಿಸ್ತಾನ ನಡುವಣ ವಿವಾದದ ಲಾಭ ಪಡೆದುಕೊಂಡು ತನ್ನ ಅಸ್ತಿತ್ವ ಗಟ್ಟಿ ಮಾಡಿಕೊಳ್ಳಲು ಆರೋಪಿ ಯತ್ನಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.