ಪ್ರಿಯಾಂಕಾ ಗಾಂಧಿ ವಾದ್ರಾ
ನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ‘ಒಂದು ದೇಶ ಒಂದು ಚುನಾವಣೆ’ಗೆ ಸಂಬಂಧಿಸಿದ ಎರಡು ಮಸೂದೆಗಳನ್ನು ಪರಿಶೀಲಿಸಲು ರಚಿಸಲಾಗುವ ಜಂಟಿ ಸಂಸದೀಯ ಸಮಿತಿಯಲ್ಲಿ (ಜೆಪಿಸಿ) ಲೋಕಸಭೆಯ 21 ಸದಸ್ಯರು ಇರಲಿದ್ದು, ಅವರಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಬಿಜೆಪಿಯ ಬಾನ್ಸುರಿ ಸ್ವರಾಜ್ ಹಾಗೂ ಎನ್‌ಸಿಪಿ (ಶರತ್‌ಚಂದ್ರ ಪವಾರ್ ಬಣ) ಪಕ್ಷದ ಸುಪ್ರಿಯಾ ಸುಳೆ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೆಪಿಸಿಯಲ್ಲಿ ಒಟ್ಟು 31 ಸದಸ್ಯರು ಇರಲಿದ್ದಾರೆ. ಯಾರೆಲ್ಲ ಅದರಲ್ಲಿ ಇರಲಿದ್ದಾರೆ ಎಂಬುದು ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಲೋಕಸಭಾ ಸದಸ್ಯರ ಪೈಕಿ ಆಡಳಿತಾರೂಢ ಎನ್‌ಡಿಎಗೆ ಸೇರಿದ 14 ಸಂಸದರು ಹಾಗೂ ವಿಪಕ್ಷಗಳ ಏಳು ಮಂದಿ ಜೆಪಿಸಿಯಲ್ಲಿ ಇರಲಿದ್ದಾರೆ.
ಲೋಕಸಭೆಯಿಂದ ಕಾಂಗ್ರೆಸ್‌ನ ಮೂವರು, ಬಿಜೆಪಿಯಿಂದ ಹತ್ತು, ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದ ಟಿಡಿಪಿ, ಜನಸೇನಾ, ಶಿವಸೇನಾ ಹಾಗೂ ಆರ್‌ಎಲ್‌ಡಿಯಿಂದ ತಲಾ ಒಬ್ಬರು ಜೆಪಿಸಿಯಲ್ಲಿ ಇರಲಿದ್ದಾರೆ. ವಿಪಕ್ಷಗಳ ಪೈಕಿ ಲೋಕಸಭೆಯಿಂದ ಟಿಎಂಸಿ, ಸಮಾಜವಾದಿ ಪಕ್ಷ, ಡಿಎಂಕೆ ಹಾಗೂ ಎನ್‌ಸಿಪಿ (ಎಸ್‌ಪಿ)ಯ ತಲಾ ಒಬ್ಬರು ಇರಲಿದ್ದಾರೆ.
ಜಂಟಿ ಸಂಸದೀಯ ಸಮಿತಿಗೆ 21 ಸದಸ್ಯರನ್ನು ಆಯ್ಕೆ ಮಾಡಲು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಗುರುವಾರ ಲೋಕಸಭೆಯಲ್ಲಿ ನಿಲುವಳಿ ಮಂಡಿಸಲಿದ್ದಾರೆ. ಜೆಪಿಸಿಗೆ ಸದಸ್ಯರನ್ನು ಆಯ್ಕೆ ಮಾಡಲು ರಾಜ್ಯಸಭೆಯಲ್ಲೂ ನಿಲುವಳಿ ಮಂಡನೆಯಾಗಲಿದೆ.
ಪ್ರಿಯಾಂಕಾ ಅವರಲ್ಲದೆ ಕಾಂಗ್ರೆಸ್‌ನಿಂದ ಮನೀಷ್ ತಿವಾರಿ ಹಾಗೂ ಸುಖದೇವ್ ಭಗತ್ ಲೋಕಸಭೆಯಿಂದ ಜೆಪಿಸಿಯಲ್ಲಿ ಇರಲಿದ್ದಾರೆ. ರಾಜ್ಯಸಭೆಯಿಂದ ರಣದೀಪ್ ಸಿಂಗ್ ಸುರ್ಜೇವಾಲ ಅವರು ಜೆಪಿಸಿಯಲ್ಲಿ ಇರಲಿ ಎಂದು ಬಯಸಿರುವುದಾಗಿ ಕಾಂಗ್ರೆಸ್ ಮೂಲಗಳು ಹೇಳಿವೆ.
ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಲೋಕಸಭೆಯಿಂದ ಜೆಪಿಸಿ ಪ್ರತಿನಿಧಿಸುವರು ಹಾಗೂ ಅದೇ ಪಕ್ಷದ ಸಾಕೇತ್ ಗೋಖಲೆ ರಾಜ್ಯಸಭೆಯಿಂದ ಪ್ರತಿನಿಧಿಸಲಿ ಎಂದು ಪಕ್ಷ ಬಯಸಿದೆ. ಡಿಎಂಕೆ ಸೆಲ್ವಗಣಪತಿ ಅವರನ್ನು ಲೋಕಸಭೆಯಿಂದ ಜೆಪಿಸಿಗೆ ಶಿಫಾರಸು ಮಾಡಿದ್ದು, ಎಸ್‌ಪಿಯಿಂದ ಧರ್ಮೇಂದ್ರ ಯಾದವ್ ಜೆಪಿಸಿಯಲ್ಲಿ ಇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಿ.ಪಿ. ಚೌಧರಿ, ಸಿ.ಎಂ. ರಮೇಶ್, ಪುರುಷೋತ್ತಮ್ ರುಪಾಲಾ, ಅನುರಾಗ್ ಠಾಕೂರ್, ಭರ್ತೃಹರಿ ಮಹತಾಬ್, ಸಂಬಿತ್ ಪಾತ್ರಾ, ವಿಷ್ಣು ದಯಾಳ್ ಶರ್ಮ, ಅನಿಲ್ ಬಲೂನಿ ಹಾಗೂ ವಿಷ್ಣು ದತ್ತ ಶರ್ಮ ಅವರೂ ಜೆಪಿಸಿಗೆ ಬಿಜೆಪಿಯ ಆಯ್ಕೆ ಆಗಿದ್ದಾರೆ ಎಂದಿವೆ.
ಶಿವಸೇನೆಯ ಶ್ರೀಕಾಂತ ಶಿಂದೆ ಅವರೂ ಜೆಪಿಸಿಯಲ್ಲಿ ಇರಲಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.