ADVERTISEMENT

ಪ್ರೊಫೆಸರ್‌ ಖಾನ್ ಬಂಧನ ಪ್ರಶ್ನಿಸಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿ

ಪಿಟಿಐ
Published 19 ಮೇ 2025, 3:09 IST
Last Updated 19 ಮೇ 2025, 3:09 IST
ಪವನ್ ಖೇರಾ –ಪಿಟಿಐ ಚಿತ್ರ
ಪವನ್ ಖೇರಾ –ಪಿಟಿಐ ಚಿತ್ರ   

ನವದೆಹಲಿ: ಸಶಸ್ತ್ರ ಪಡೆಯ ಅಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಸಚಿವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಮೋದಿ ಸರ್ಕಾರ, ಹಿಂಸಾಚಾರದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕಾಗಿ ಪ್ರೊಫೆಸರ್‌ ಅಲಿ ಖಾನ್ ಮೊಹಮ್ಮದ್‌  ಅವರನ್ನು ಬಂಧಿಸಿರುವುದು ಕೇಂದ್ರ ಸರ್ಕಾರದ ದ್ವಿಮುಖ ನೀತಿಗೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕಾಂಗ್ರೆಸ್‌ ಮುಖಂಡ ಪವನ್ ಖೇರಾ, ಹಿಂಸಾಚಾರದ ವಿರುದ್ಧ ಪೋಸ್ಟ್‌ ಹಂಚಿಕೊಂಡಿದ್ದು ಪ್ರೊಫೆಸರ್‌ ಅವರ ಮೊದಲ ತಪ್ಪು, ಎರಡನೇಯ ತಪ್ಪು ಅವರ ಹೆಸರು (ಮುಸ್ಲಿಂಮರು). 'ನಾವು ಚರ್ಚೆ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವ ಭಾರತ ಜತೆ ನಿಲ್ಲುತ್ತೇವೆ, ಹೊರತು ಆದೇಶಗಳಲ್ಲ' ಎಂದು ಕಿಡಿಕಾರಿದ್ದಾರೆ.

‘ಕರ್ನಲ್‌ ಸೋಫಿಯಾ ಅವರನ್ನು ಶ್ಲಾಘಿಸುವ ಬಲಪಂಥೀಯ ಜನರು, ಗುಂ‍ಪು ಹಲ್ಲೆಗಳು ಹಾಗೂ ಬುಲ್ಡೋಜರ್‌ ಕ್ರಮದ ಸಂತ್ರಸ್ತರಿಗೆ ರಕ್ಷಣೆ ನೀಡುವಂತೆಯೂ ಒತ್ತಾಯಿಸಬೇಕು’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮೇ 7ರಂದು ಖಾನ್‌ ಪೋಸ್ಟ್ ಮಾಡಿದ್ದರು.

ADVERTISEMENT

‘ಇಬ್ಬರೂ ಅಧಿಕಾರಿಗಳು ‘ಆಪರೇಷನ್‌ ಸಿಂಧೂರ’ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವುದು ವಾಸ್ತವದಲ್ಲಿಯೂ ಸಾಧ್ಯವಾಗಬೇಕು. ಇಲ್ಲದಿದ್ದರೆ ಅದು ಕೇವಲ ಬೂಟಾಟಿಕೆಯಾಗುತ್ತದೆ’ ಎಂದೂ ಖಾನ್‌ ಹೇಳಿದ್ದರು.

'ಚಿಂತನಶೀಲ ಪೋಸ್ಟ್‌ ಹಂಚಿಕೊಂಡಿದ್ದಕ್ಕಾಗಿ ಮೊಹಮ್ಮದ್‌ ಅವರನ್ನು ಬಂಧಿಸಲಾಗಿದೆ. ಒಬ್ಬ ಇತಿಹಾಸಕಾರ ಮತ್ತು ಶಿಕ್ಷಣ ತಜ್ಞರನ್ನು ಜೈಲಿಗೆ ಹಾಕಲಾಗಿದೆ. ಹಿಂಸೆಯನ್ನು ಪ್ರಚೋದಿಸಿದ್ದಕ್ಕಾಗಿ ಅಲ್ಲ, ಬದಲಿಗೆ ಅದರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಎಂದು ಖೇರಾ ಆಕ್ರೋಶ ವ್ಯಕ್ತ‍ಪಡಿಸಿದ್ದಾರೆ.

‘ಇದು ಒಬ್ಬ ವ್ಯಕ್ತಿಯ ಬಗ್ಗೆ ಅಲ್ಲ, ಇದು ವಾಕ್ ಸ್ವಾತಂತ್ರ್ಯವನ್ನು ನಿಧಾನವಾಗಿ ಹತ್ತಿಕ್ಕುವ ಹುನ್ನಾರವಾಗಿದೆ, ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸುವುದು ಮತ್ತು ಬಿಜೆಪಿಯ ಸರ್ವಧಿಕಾರದ ಧೋರಣೆಯನ್ನು ಪ್ರಶ್ನಿಸುವ ಬುದ್ಧಿಜೀವಿಗಳನ್ನು ಮೌನಗೊಳಿಸಲು ಬಳಸುತ್ತಿರುವ ಕುತಂತ್ರವಾಗಿದೆ‘ ಎಂದು ಖೇರಾ ಕಿಡಿಕಾರಿದ್ದಾರೆ.

ಅಲಿ ಖಾನ್‌ ಅವರ ಹೇಳಿಕೆಯನ್ನು ಖಂಡಿಸಿ ಹರಿಯಾಣ ರಾಜ್ಯ ಮಹಿಳಾ ಆಯೋಗವು ಮೇ 12ರಂದು ಅವರಿಗೆ ನೋಟಿಸ್‌ ನೀಡಿತ್ತು. ಮಹಿಳಾ ಅಧಿಕಾರಿಗಳು, ದೇಶದ ಸಶಸ್ತ್ರ ಪಡೆಗಳ ವಿರುದ್ಧ ಈ ರೀತಿಯ ಹೇಳಿಕೆ ನೀಡುವುದು ಕಳವಳಕಾರಿಯಾಗಿದೆ ಎಂದು ಹೇಳಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಖಾನ್‌ ‘ಮಹಿಳಾ ಆಯೋಗವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ, ನನ್ನ ಹೇಳಿಕೆಯನ್ನು ತಪ್ಪಾಗಿ ಓದಿ, ಅರ್ಥೈಸಿಕೊಂಡಿದೆ. ನನ್ನ ‍ಹೇಳಿಕೆಯನ್ನು ಅದು ಸಂಪೂರ್ಣವಾಗಿ ತಲೆಕೆಳಗಾಗಿಸಿದೆ’ ಎಂದು ಹೇಳಿದ್ದರು.

‘ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸಲು ಹಾಗೂ ಸಶಸ್ತ್ರ ಪಡೆಗಳನ್ನು ಶ್ಲಾಘಿಸಲು ನನ್ನ ವಾಕ್‌ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಚಲಾಯಿಸಿದ್ದೇನೆ. ದೇಶವನ್ನು ಅಸ್ಥಿರಗೊಳಿಸಲು ಮತ್ತು ದ್ವೇಷ ಹರಡಲು ಯತ್ನಿಸುವವರು ನನ್ನ ಹೇಳಿಕೆಯನ್ನು ಟೀಕಿಸುತ್ತಿದ್ದಾರೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.