
ಕಾರ್ಮಿಕರು
ಚಂಡೀಗಢ: ಪಂಜಾಬ್‌ನ ಆಮ್ ಆದ್ಮಿ ಪಕ್ಷ (ಎಎಪಿ) ನೇತೃತ್ವದ ಸರ್ಕಾರವು ‘ವಿಬಿ ಜಿ ರಾಮ್ ಜಿ’ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ಮಂಗಳವಾರ ನಿರ್ಣಯ ಮಂಡಿಸಿದೆ.
ಈ ಕುರಿತು ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ತರುಣ್‌ಪ್ರೀತ್ ಸಿಂಗ್ ಸೊಂದ್,‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ನಾಶ ಮಾಡಲು ಹೊರಟಿದೆ’ ಎಂದು ಟೀಕಿಸಿದರು.
ನಿರ್ಣಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸೊಂದ್, ‘ಬಡತನ ರೇಖೆಗಿಂತ ಕೆಳಗೆ ಇರುವವರು, ಎಸ್‌ಸಿ ಸಮುದಾಯದವರು ಹಾಗೂ ಗ್ರಾಮೀಣ ಭಾಗದ ಕೂಲಿಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ನರೇಗಾ ಯೋಜನೆಯನ್ನೇ ಅವಲಂಬಿಸಿದ್ದಾರೆ. ಹೊಸದಾಗಿ ರೂಪಿಸಿರುವ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ)’ ಕಾಯ್ದೆಯಿಂದ ಇವರಿಗೆ ಸಾಕಷ್ಟು ತೊಂದರೆಯಾಗಲಿದೆ’ ಎಂದು ಹೇಳಿದರು.
ಎಎಪಿ ಶಾಸಕ ಕುಲದೀಪ್ ಸಿಂಗ್ ಧಲಿವಾಲ್,‘ಈ ನೂತನ ಕಾಯ್ದೆ ಬಡವರ ವಿರೋಧಿಯಾಗಿದ್ದು, ಕೂಡಲೇ ಇದನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
ಬೇಡಿಕೆ ಹಾಗೂ ಹಕ್ಕುಗಳನ್ನು ಆಧರಿಸಿದ ಹಾಗೂ ಕೇಂದ್ರ ಸರ್ಕಾರವೇ ಯೋಜನೆಯ ವೆಚ್ಚವನ್ನು ಭರಿಸಬೇಕು. ರಾಜ್ಯಗಳ ಮೇಲೆ ವಿತ್ತೀಯ ಹೊರೆ ಹೊರಿಸುವ ಹಾಗೂ ಗ್ರಾಮೀಣ ಭಾಗದ ಕೂಲಿಕಾರ್ಮಿಕರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವಂತಹ ಅವಕಾಶಗಳನ್ನು ವಿಬಿ–ಜಿ ರಾಮ್ ಜಿ ಕಾಯ್ದೆ ಒಳಗೊಂಡಿದೆ. ಹೀಗಾಗಿ ಈ ಅವಕಾಶಗಳ ಕುರಿತು ಮರುಪರಿಶೀಲನೆ ನಡೆಸಬೇಕು ಎಂಬ ಒತ್ತಾಯಗಳನ್ನು ಈ ನಿರ್ಣಯ ಒಳಗೊಂಡಿದೆ.
ಅಸಾಂವಿಧಾನಿಕ ನಡೆ: ಚೌಹಾಣ್
ಭೋಪಾಲ್: ವಿಬಿ–ಜಿ ರಾಮ್ ಜಿ ಕಾಯ್ದೆ ವಿರುದ್ಧ ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿರುವುದು ಅಸಾಂವಿಧಾನಿಕ ನಡೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ಹೇಳಿದ್ದಾರೆ. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಂಸತ್ ರೂಪಿಸಿದ ಕಾಯ್ದೆಗಳನ್ನು ಪಾಲನೆ ಮಾಡುವುದು ರಾಜ್ಯಗಳ ಸಾಂವಿಧಾನಿಕ ಹೊಣೆಗಾರಿಕೆಯಾಗಿದೆ’ ಎಂದು ಹೇಳಿದರು. ‘ಎಎಪಿ ಸರ್ಕಾರದ ಈ ಕ್ರಮ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದುದು ಹಾಗೂ ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸಬೇಕು ಎಂಬ ರಾಜಕೀಯ ಧೋರಣೆಯನ್ನು ಇದು ತೋರಿಸುತ್ತದೆ’ ಎಂದು ಚೌಹಾಣ್ ಟೀಕಿಸಿದರು.
ಇದೇ ವೇಳೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು‘ಅವರು ಭ್ರಮಾಲೋಕದಲ್ಲಿ ಬದುಕುತ್ತಿದ್ದಾರೆ. ಈ ದೇಶದ ವಾಸ್ತವದ ಬಗ್ಗೆ ಅವರಿಗೆ ಅರಿವು ಇಲ್ಲ. ಮನಸ್ಸಿಗೆ ತೋಚಿದಂತೆ ಮಾತನಾಡುವುದು ರಾಜಕೀಯವಲ್ಲ’ ಎಂದು ಹೇಳಿದರು. ‘ಯುಪಿಎ ಸರ್ಕಾರ ಜಾರಿಗೆ ತಂದಿರುವ ನರೇಗಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಿದ್ದಾರೆ. ಈ ಬಗ್ಗೆ ಸಚಿವ ಸಂಪುಟದೊಂದಿಗೆ ಸಮಾಲೋಚನೆ ಮಾಡಿಲ್ಲ ಅಥವಾ ಕಾಯ್ದೆ ಕುರಿತು ಅಧ್ಯಯನವನ್ನೂ ನಡೆಸಿಲ್ಲ. ಅವರು ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಇತ್ತೀಚೆಗೆ ರಾಹುಲ್ ಗಾಂಧಿ ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.