ಜಸ್‌ಬಿರ್ ಸಿಂಗ್
ಚಿತ್ರಕೃಪೆ: ಎಕ್ಸ್
ಚಂಡೀಗಢ: ಪಾಕಿಸ್ತಾನದ ಪರವಾಗಿ ಗೂಢಚಾರಿಕೆ ಮಾಡುತ್ತಿದ್ದ ಮತ್ತು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಜೊತೆ ಸಂಪರ್ಕದಲ್ಲಿದ್ದ ಪಂಜಾಬ್‌ನ ಯೂಟ್ಯೂಬರ್ ಜಸ್‌ಬಿರ್ ಸಿಂಗ್ ಅಲಿಯಾಸ್ ಜಾನ್ ಮಹಲ್‌ನನ್ನು (41) ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನದ ಗುಪ್ತಚರ ವಿಭಾಗ ಐಎಸ್‌ಐ ಮತ್ತು ಅಲ್ಲಿನ ಸೇನೆಯ ಅಧಿಕಾರಿಗಳ ಜೊತೆಗೆ ನಿಕಟ ಸಂಪರ್ಕದಲ್ಲಿ ಇರುವುದು ತನಿಖೆಯಲ್ಲಿ ದೃಢವಾದ ಬಳಿಕ ಆತನನ್ನು ಬಂಧಿಸಲಾಯಿತು ಎಂದು ಪಂಜಾಬ್‌ನ ಡಿಜಿಪಿ ಗೌರವ್ ಯಾದವ್ ಅವರು ತಿಳಿಸಿದ್ದಾರೆ.
ಪಂಜಾಬ್ ರೂಪ್‌ನಗರ್ ಜಿಲ್ಲೆ ಮಹ್ಲನ್ ಗ್ರಾಮದ ನಿವಾಸಿ ಜಸ್‌ಬಿರ್ ಸಿಂಗ್, ‘ಜಾನ್ ಮಹಲ್’ ಹೆಸರಿನಲ್ಲಿ ಯೂಟ್ಯೂಬ್ ವಿಡಿಯೊ ಚಾನಲ್ ನಡೆಸುತ್ತಿದ್ದು, ಈ ಚಾನಲ್‌ಗೆ 11 ಲಕ್ಷ ಚಂದಾದಾರರಿದ್ದಾರೆ. ಪ್ರವಾಸ ಮತ್ತು ಅಡುಗೆ ಸಂಬಂಧಿತ ವಿಡಿಯೊ ಪ್ರಸಾರ ಮಾಡುತ್ತಿದ್ದರು.
‘ಪಾಕಿಸ್ತಾನ ಗುಪ್ತಚರ ನಿರ್ವಾಹಕ (ಪಿಐಒ) ಶಕೀರ್ ಅಲಿಯಾಸ್ ಜಾಟ್ ರಾಂಧವ ಜೊತೆಗೆ ಈತ ಸಂಪರ್ಕದಲ್ಲಿದ್ದು, ಪಾಕ್ ಪರ ಗೂಢಚಾರಿಕೆ ಮಾಡುತ್ತಿದ್ದ. 2020, 2021, 2024ರಲ್ಲಿ ಪಾಕ್‌ಗೆ ಭೇಟಿ ನೀಡಿದ್ದು, ಐಎಸ್‌ಐ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದ. ಜ್ಯೋತಿ ಬಂಧನದ ಬಳಿಕ ತನ್ನ ಪಾಕ್ ಸಂಪರ್ಕಕ್ಕೆ ಸಂಬಂಧಿಸಿದ ವಿವರಗಳನ್ನು ಅಳಿಸಿಹಾಕಲು ಪ್ರಯತ್ನಿಸಿದ್ದ’ ಎಂದರು.
ಜ್ಯೋತಿ ಮತ್ತು ಸಿಂಗ್ 2024ರಲ್ಲಿ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪರಿಚಿತರಾಗಿದ್ದು, ಪರಸ್ಪರ ಸಂಪರ್ಕಕ್ಕೆ ಬಂದಿದ್ದರು. ಪಾಕ್ ರಾಯಭಾರಿ ಕಚೇರಿ ಅಧಿಕಾರಿಯಾಗಿದ್ದ ಡ್ಯಾನಿಶ್ ಅಲಿಯಾಸ್ ಎಹಸಾನ್ ಉರ್ ರಹೀಂ ಜೊತೆಗೆ ಸಂಪರ್ಕದಲ್ಲಿದ್ದ ಎಂದು ಅವರು ವಿವರಿಸಿದರು.
ಬಂಧಿತ ಸಿಂಗ್‌ನನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ಮೊಹಾಲಿ ಕೋರ್ಟ್ ಈತನನ್ನು ಮೂರು ದಿನ ಅವಧಿಗೆ ಪೊಲೀಸ್ ವಶಕ್ಕೆ ನೀಡಿತು.
ಬಂಧಿತ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಅಧಿಕೃತ ರಹಸ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.