ADVERTISEMENT

ಪಂಜಾಬ್‌ನಲ್ಲಿ ಗ್ರೆನೇಡ್‌ ದಾಳಿ: 'ಪ್ರಮುಖ ಸಂಚುಕೋರ ಪಾಕ್‌ ಉಗ್ರನ ಸಹಚರ'–ಡಿಜಿಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2022, 12:29 IST
Last Updated 13 ಮೇ 2022, 12:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡಿಗಡ: ಮೊಹಾಲಿಯಲ್ಲಿರುವ ಪಂಜಾಬ್‌ ಪೊಲೀಸ್‌ನ ಗುಪ್ತಚರ ವಿಭಾಗದ ಕೇಂದ್ರ ಕಚೇರಿ ಮೇಲೆ ನಡೆದ ರಾಕೆಟ್‌ ಚಾಲಿತ ಗ್ರೆನೇಡ್‌ (ಆರ್‌ಪಿಜಿ) ದಾಳಿಯ ಪ್ರಮುಖ ಸಂಚುಕೋರನು ಪಾಕಿಸ್ತಾನ ಮೂಲದ ಉಗ್ರನ ಸಹಚರನಾಗಿರುವುದು ಪತ್ತೆಯಾಗಿದೆ. ಈ ಕುರಿತು ಪಂಜಾಬ್‌ನ ಡಿಜಿಪಿ ವಿ.ಕೆ. ಭಾವರಾ ಮಾಹಿತಿ ನೀಡಿದ್ದಾರೆ.

'ಲಖ್ಬಿರ್‌ ಸಿಂಗ್‌ ಲಾಂಡಾ ಈ ಪ್ರಕರಣದ ಪ್ರಮುಖ ಸಂಚುಕೋರ. ಆತ ತರನ್‌ ತಾರನ್‌ನ ನಿವಾಸಿಯಾಗಿದ್ದಾನೆ. ಗ್ಯಾಂಗ್‌ಸ್ಟರ್‌ ಆಗಿರುವ ಆತ 2017ರಲ್ಲಿ ಕೆನಡಾಗೆ ತೆರಳಿದ್ದನು. ಆತ ಹರಿಂದರ್‌ ಸಿಂಗ್‌ ರಿಂದಾನ ಆಪ್ತ ಸಹಚರನಾಗಿದ್ದಾನೆ. ಹರಿಂದರ್‌ ಪಾಕಿಸ್ತಾನ ಮೂಲದ ಉಗ್ರಗಾಮಿ' ಎಂದು ಡಿಜಿಪಿ ಹೇಳಿದ್ದಾರೆ.

ಮೊಹಾಲಿ ಸೆಕ್ಟರ್‌ 77ರ ಕಟ್ಟಡದ ಮೂರನೇ ಮಹಡಿಯಲ್ಲಿ ಸೋಮವಾರ ಸಂಜೆ 7:45ಕ್ಕೆ ಸ್ಫೋಟ ಸಂಭವಿಸಿತ್ತು. ಆ ವೇಳೆ ಬಹುತೇಕ ಅಧಿಕಾರಿಗಳು ಮನೆಗೆ ಮರಳಿದ್ದರು, ಕೋಣೆಯಲ್ಲಿ ಯಾರೂ ಇರಲಿಲ್ಲ. ಕೋಣೆಯ ಗೋಡೆಗಳಿಗೆ ಹಾನಿಯಾಗಿತ್ತು ಹಾಗೂ ಕಿಟಕಿಯ ಗಾಜುಗಳು ಪುಡಿಪುಡಿಯಾಗಿದ್ದವು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಲವು ಜನರನ್ನು ವಶಕ್ಕೆ ಪಡೆದಿದ್ದರು.

ADVERTISEMENT

ಉಗ್ರ ಸಂಘಟನೆ ಬಬ್ಬರ್‌ ಖಾಲಸಾ ಇಂಟರ್‌ನ್ಯಾಷನಲ್‌ (ಬಿಕೆಐ) ಮತ್ತು ಗ್ಯಾಂಗ್‌ಸ್ಟರ್‌ ಲಖ್ಬಿರ್‌ ಸಿಂಗ್‌ ಲಾಂಡಾ ಜೊತೆಗೂಡಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಬೆಂಬಲದೊಂದಿಗೆ ದಾಳಿಗೆ ಯೋಜನೆ ರೂಪಿಸಿದ್ದರು ಎಂದು ಡಿಜಿಪಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ನಿಶಾಂತ್‌ ಸಿಂಗ್‌ ಮತ್ತಿಬ್ಬರು ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿರುವುದು ಗೊತ್ತಾಗಿದೆ. ಇವರೊಂದಿಗೆ ಬಲ್ಜಿಂದರ್‌ ರಾಂಬೊ ಸಹ ಭಾಗಿಯಾಗಿದ್ದ. ಆತನೂ ತರನ್‌ ತಾರನ್‌ ನಿವಾಸಿಯಾಗಿದ್ದು, ಆತನಿಂದ ಎಕೆ–47 ಬಂದೂಕು ವಶಪಡಿಸಿಕೊಂಡಿರುವುದಾಗಿ ವಿ.ಕೆ. ಭಾವರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.