ADVERTISEMENT

Punjab Results: ಎಎಪಿ ಅಭ್ಯರ್ಥಿ ವಿರುದ್ಧ ಸೋನು ಸೂದ್ ಸಹೋದರಿ ಮಾಳವಿಕಾಗೆ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2022, 10:36 IST
Last Updated 10 ಮಾರ್ಚ್ 2022, 10:36 IST
ನಟ ಸೋನು ಸೂದ್ ಹಾಗೂ ಅವರ ಸಹೋದರಿ ಮಾಳವಿಕಾ ಸೂದ್ (ಕೃಪೆ: ಸೋನು ಸೂದ್ ಇನ್‌ಸ್ಟಾಗ್ರಾಂ)
ನಟ ಸೋನು ಸೂದ್ ಹಾಗೂ ಅವರ ಸಹೋದರಿ ಮಾಳವಿಕಾ ಸೂದ್ (ಕೃಪೆ: ಸೋನು ಸೂದ್ ಇನ್‌ಸ್ಟಾಗ್ರಾಂ)   

ಚಂಡೀಗಡ: ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರು ಪಂಜಾಬ್‌ನ ‘ಮೊಗಾ’ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗದ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.

‘ಮೊಗಾ’ದಲ್ಲಿ ಎಎಪಿಯ ಡಾ. ಅಮನ್‌ದೀಪ್ ಕೌರ್ ಆರೋರ 59,149 ಮತ ಗಳಿಸಿ ಮುನ್ನಡೆ ಕಾಯ್ದುಕೊಂಡಿದ್ದರೆ, ಮಾಳವಿಕಾ ಸೂದ್ 38,234 ಮತ ಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಶಿರೋಮಣಿ ಅಕಾಲಿ ದಳದ ಅಭ್ಯರ್ಥಿಗಳು ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.

ಮಾಳವಿಕಾ ಸೂದ್ ಅವರು ಜನವರಿ 10ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ನಟ ಸೋನು ಸೂದ್ ಅವರ ನಿವಾಸದಲ್ಲೇ ಮಾಳವಿಕಾ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿತ್ತು.

ಕಳೆದ ವರ್ಷ ಕೋವಿಡ್–19 ಲಾಕ್‌ಡೌನ್‌ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದವರು, ವಲಸೆ ಕಾರ್ಮಿಕರು ಸುರಕ್ಷಿತವಾಗಿ ಊರುಗಳಿಗೆ ಮರಳಲು ಬಸ್ಸು, ವಿಮಾನದ ವ್ಯವಸ್ಥೆಯನ್ನು ಸೋನು ಸೂದ್‌ ಮಾಡಿದ್ದರು. ತಮ್ಮ ಸ್ವಂತ ಖರ್ಚಿನಲ್ಲಿ ವಾಹನ ವ್ಯವಸ್ಥೆ ಮಾಡಿದ್ದಲ್ಲದೇ ಆರ್ಥಿಕ ಸಹಾಯವನ್ನೂ ನೀಡಿದ್ದರು. ಸೋನು ಅವರ ಈ ಕಾರ್ಯಕ್ಕೆ ದೇಶವೇ ತಲೆದೂಗಿತ್ತು. ರಾಜಕಾರಣಿಗಳು, ಸಿನಿಮಾರಂಗದವರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಕೂಡ ಸೋನು ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ಅವರ ಸಹೋದರಿಯ ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ನೆರವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಎಲ್ಲ ಲೆಕ್ಕಾಚಾರಗಳನ್ನೂ ಎಎಪಿ ಬುಡಮೇಲು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.