ADVERTISEMENT

ಎಐ, ಡ್ರೋನ್‌, ಸ್ನೈಪರ್‌, ಜಾಮರ್... ಹೀಗಿದೆ ಭಾರತದಲ್ಲಿ ಪುಟಿನ್‌ಗೆ ಭದ್ರತೆ

ಏಜೆನ್ಸೀಸ್
Published 3 ಡಿಸೆಂಬರ್ 2025, 10:56 IST
Last Updated 3 ಡಿಸೆಂಬರ್ 2025, 10:56 IST
<div class="paragraphs"><p>ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ</p></div>

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಭಾರತ ಭೇಟಿ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತೆ ಬಿಗಿ ಮಾಡಲಾಗಿದೆ. ಐದು ಹಂತಗಳ ಭದ್ರತೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 

ADVERTISEMENT

ರಷ್ಯಾದ ಅಧ್ಯಕ್ಷೀಯ ಭದ್ರತಾ ಸೇವೆಯಲ್ಲಿ ಉನ್ನತ ಮಟ್ಟದ ತರಬೇತಿ ಪಡೆದ ಸಿಬ್ಬಂದಿ, ಭಾರತದ ರಾಷ್ಟ್ರೀಯ ಭದ್ರತಾ ದಳದ (NSG) ಕಮಾಂಡೊಗಳು, ಸ್ನೈಪರ್‌, ಡ್ರೋನ್‌, ಜಾಮರ್‌ಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಶೀಲನಾ ವ್ಯವಸ್ಥೆ ಸೇರಿದಂತೆ ಐದು ಹಂತಗಳ ಭದ್ರತೆ ಕೈಗೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಭಾರತ–ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್‌ ಭಾರತಕ್ಕೆ ಬರುತ್ತಿದ್ದಾರೆ. ನಾಳೆ ಸಂಜೆ ಅವರು ಭಾರತಕ್ಕೆ ಬಂದಿಳಿಯಲಿದ್ದಾರೆ. ಮೂಲಗಳ ಪ್ರಕಾರ, ಪ್ರಧಾನಿ ಮೋದಿಯವರ ಜತೆ ರಾತ್ರಿ ಊಟ ಮತ್ತು ರಾಷ್ಟ್ರಪತಿ ಭವನದಲ್ಲಿ ಸ್ವಾಗತ ಕಾರ್ಯಕ್ರಮ ಆಯೋಜನೆಗೊಂಡಿದೆ. 

ಶುಕ್ರವಾರ ರಾಜ್‌ಘಾಟ್‌ಗೆ ತೆರಳಿ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಲಿದ್ದಾರೆ. ನಂತರ ಭಾರತ ಮಂಟಪಮ್‌ನಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

ಈಗಾಗಲೇ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲು 50ಕ್ಕೂ ಹೆಚ್ಚು ರಷ್ಯಾದ ಭದ್ರತಾ ಸಿಬ್ಬಂದಿ ದೆಹಲಿಗೆ ಆಗಮಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.

ಈ ಭದ್ರತಾ ಅಧಿಕಾರಿಗಳೊಂದಿಗೆ ದೆಹಲಿ ಪೊಲೀಸ್ ಮತ್ತು ಎನ್‌ಎಸ್‌ಜಿ ಸಿಬ್ಬಂದಿ, ಪುಟಿನ್‌ ಸಾಗುವ ದಾರಿಯ ನೈರ್ಮಲ್ಯದ ಬಗ್ಗೆಯೂ ನಿಗಾ ಇಡಲಿದ್ದಾರೆ. ಜತೆಗೆ ಪುಟಿನ್ ಭದ್ರತೆಗಾಗಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿ ಮತ್ತು ವಿಶೇಷ ಡ್ರೋನ್‌ಗಳು ಎಲ್ಲಾ ಸಮಯದಲ್ಲೂ ಅವರ ಕ್ಯಾವಲ್‌ಕೇಡ್ ಮೇಲೆ ಕಣ್ಣಿಟ್ಟಿರುವುದನ್ನು ಖಚಿತಪಡಿಸುತ್ತದೆ. ಸ್ನೈಪರ್‌ಗಳು ಅಧ್ಯಕ್ಷರ ಚಲನವಲನದ ಮಾರ್ಗವನ್ನು ನಿಗಾವಹಿಸಲಿದ್ದಾರೆ. ಜಾಮರ್ ಮತ್ತು ಎಐ ಆಧಾರಿತ ತಂತ್ರಜ್ಞಾನದ ಅಳವಡಿಕೆ, ಮುಖ ಗುರುತು ಪತ್ತೆ ಕ್ಯಾಮರಾ ಸೇರಿ ಪುಟಿನ್‌ ಭದ್ರತೆಗೆ ಬೃಹತ್‌ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.

ರಷ್ಯಾದ ಭದ್ರತಾ ಸಿಬ್ಬಂದಿಯೇ ಪುಟಿನ್‌ ಅವರ ಭದ್ರತೆ ಕೈಗೊಳ್ಳಲಿದ್ದಾರೆ. ಆದರೆ ಪುಟಿನ್‌ ಮತ್ತು ಮೋದಿ ಭೇಟಿ ವೇಳೆ ಭಾರತದ ಎನ್‌ಎಸ್‌ಜಿ ಕಮಾಂಡೊಗಳು ರಷ್ಯಾ ಭದ್ರತಾ ಅಧಿಕಾರಿಗಳೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.