ADVERTISEMENT

ಪುಟಿನ್ ಭೇಟಿ: ಕಣ್ಮರೆಯಾದ ವ್ಯಕ್ತಿ ಬಗ್ಗೆ ತಿಳಿಯುವ ನಿರೀಕ್ಷೆಯಲ್ಲಿ ಕೇರಳ ಕುಟುಂಬ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 14:48 IST
Last Updated 5 ಡಿಸೆಂಬರ್ 2025, 14:48 IST
<div class="paragraphs"><p>ಬಿನಿಲ್ ಬಾಬು</p></div>

ಬಿನಿಲ್ ಬಾಬು

   

ಚಿತ್ರ ಕೃಪೆ; ಡೆಕ್ಕನ್‌ ಹೆರಾಲ್ಡ್‌

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನಡುವೆ ಉಭಯ ದೇಶಗಳ ಸಂಬಂಧ ವೃದ್ಧಿಗೆ ಮಾತುಕತೆ ನಡೆಯುತ್ತಿದೆ. ಇತ್ತ ಉಕ್ರೇನ್‌ ವಿರುದ್ಧ ರಷ್ಯಾ ನಡೆಸಿದ ಯುದ್ಧದಲ್ಲಿ ಭಾಗಿಯಾಗಿದ್ದ ಕೇರಳದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಗಲಿದೆ ಎನ್ನುವ ವಿಶ್ವಾಸದಲ್ಲಿ ಕುಟುಂಬವಿದೆ.

ADVERTISEMENT

ತ್ರಿಶೂರ್‌ ಮೂಲದ 32 ವರ್ಷದ ಬಿನಿಲ್ ಬಾನು ಎನ್ನುವವರು 2025ರ ಜನವರಿಯಲ್ಲಿ ರಷ್ಯಾ–ಉಕ್ರೇನ್‌ ಯುದ್ಧಭೂಮಿಯಲ್ಲಿ ನಾಪತ್ತೆಯಾಗಿದ್ದಾರೆ. ಅವರು ಮೃತಪಟ್ಟಿರುವ ಸಾಧ್ಯತೆಯೂ ಇದೆ. ಆದರೆ ಅವರ ಬಗ್ಗೆ ಕುಟುಂಬಕ್ಕೆ ಯಾವುದೇ ಮಾಹಿತಿ ಇನ್ನುವರೆಗೂ ದೊರೆತಿಲ್ಲ.

‘ರಾಯಭಾರ ಕಚೇರಿಯಿಂದ ಕೊನೆಯದಾಗಿ ಬಿನಿಲ್‌ ಕಣ್ಮರೆಯಾಗಿದ್ದಾರೆ ಎನ್ನುವ ಸಂದೇಶ ಬಂದಿತ್ತು. ಅದಾದ ನಂತರ ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಬಿನಿಲ್‌ ಪತ್ನಿ ಜಾಯ್ಸಿ ಡೆಕ್ಕನ್‌ ಹೆರಾಲ್ಡ್‌ಗೆ ತಿಳಿಸಿದ್ದಾರೆ.

ಈಗ ಪುಟಿನ್‌ ಮತ್ತು ಮೋದಿ ಅವರ ಮಾತುಕತೆಯಿಂದ ಉಭಯ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾದರೆ ಬಿನಿಲ್‌ ಬಗ್ಗೆ ತಿಳಿಯಲು ಸಹಾಯಕವಾಗಲಿದೆ ಎನ್ನುವುದು ಕುಟುಂಬದವರ ವಿಶ್ವಾಸ.

‘ಬಿನಿಲ್‌ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ ಎನ್ನುವುದು ಮಾನಸಿಕವಾಗಿ ಕಾಡುವ ವಿಚಾರವೂ ಹೌದು, ಜತೆಗೆ ತಾಂತ್ರಿಕ ಸಮಸ್ಯೆಯೂ ಇಲ್ಲಿದೆ’ ಎನ್ನುತ್ತಾರೆ ಜಾಯ್ಸಿ. 

ಮಗುವಿನ ಅಧಿಕೃತ ದಾಖಲೆಗಳಲ್ಲಿ ತಿದ್ದುಪಡಿ ಮಾಡುವ ಉದ್ದೇಶದಿಂದ, ಬಿನಿಲ್‌ ಮೃತಪಟ್ಟಿದ್ದರೆ ಅವರ ಮರಣ ಪ್ರಮಾಣಪತ್ರ ನೀಡುವಂತೆ ಅಧಿಕಾರಿಗಳನ್ನು ಕೇಳಿದ್ದಾರೆ.

ಬಿನಿಲ್ ಸಂಬಂಧಿ ಜೈನ್‌ ಕುರಿಯನ್‌ ಕೂಡ ರಷ್ಯಾ ಯುದ್ಧದಲ್ಲಿ ಭಾಗಿಯಾಗಿದ್ದರು. ಆದರೆ ಕಳೆದ ಏಪ್ರಿಲ್‌ನಲ್ಲಿ ಅವರು ಗಂಭೀರ ಗಾಯಗಳ ನಡುವೆಯೇ ವಾಪಸ್ಸಾಗಿದ್ದಾರೆ.

ನೇಮಕಾತಿ ಏಜೆಂಟರುಗಳು ಕೆಲಸ ಕೊಡಿಸುವುದಾಗಿ ಹೇಳಿ ಮೋಸ ಮಾಡಿ ಯಾವುದೇ ತರಬೇತಿ ನೀಡದೆ ಬಿನಿಲ್‌ ಮತ್ತು ಜೈನ್‌ ಅವರನ್ನು ಯುದ್ಧಭೂಮಿಗೆ ಕರೆದೊಯ್ದಿದ್ದರು.

‘ಕಳೆದ ಜನವರಿಯಲ್ಲಿ ಅವರು ಯುದ್ಧಕ್ಕೆ ಕರೆದೊಯ್ದಿದ್ದರು. ಬಿನಿಲ್‌ ಮೃತದೇಹವನ್ನು ಯುದ್ಧಭೂಮಿಯಲ್ಲಿ ನೋಡಿದ್ದೆ. ಭಾರತೀಯ ರಾಯಭಾರ ಕಚೇರಿ ಆರಂಭದಲ್ಲಿ ಬಿನಿಲ್‌ ಮೃತಪಟ್ಟಿರುವುದಾಗಿ ಹೇಳಿತ್ತು. ದೃಢೀಕರಣಕ್ಕಾಗಿ ಬಿನಿಲ್‌ ತಂದೆಯ ಡಿಎನ್‌ಎಯನ್ನೂ ಕಲೆಹಾಕಿತ್ತು. ಆದರೆ ನಂತರ ಬಿನಿಲ್‌ ನಾಪತ್ತೆಯಾಗಿದ್ದಾರೆ ಎಂದಷ್ಟೇ ಹೇಳಿದೆ’ ಎಂದು ಜೈನ್ ಹೇಳಿದ್ದಾರೆ.

ಬಿನಿಲ್‌ ಅವರ ಪತ್ತೆಗಾಗಿ ಕುಟುಂಬ, ಕೇಂದ್ರ ಸಚಿವ ಸುರೇಶ್‌ ಗೋಪಿ ಸೇರಿದಂತೆ ಹಲವು ಮೂಲಗಳಿಂದ ಮಾಹಿತಿ ತಿಳಿಯಲು ಯತ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.