ನವದೆಹಲಿ: ‘ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದ ಒಳಗೆ ಮತ್ತು ವಿದೇಶಗಳಲ್ಲಿ ತಮ್ಮ ಚಲನವಲನಗಳ ಬಗ್ಗೆ ಸೂಕ್ತ ಮಾಹಿತಿ ನೀಡದೆ, ಭದ್ರತಾ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ’ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆಯು (ಸಿಆರ್‌ಪಿಎಫ್) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ತಿಳಿಸಿದೆ.
‘ರಾಹುಲ್ ಗಾಂಧಿ ಅವರು ದೇಶದೊಳಗೆ ತಮ್ಮ ಅಘೋಷಿತ ಚಲನೆಗಳ ಬಗ್ಗೆ ಯಾವುದೇ ಮಾಹಿತಿ ನೀಡದೆ ಸಂಚರಿಸುತ್ತಿದ್ದಾರೆ. ಅಲ್ಲದೆ ವಿದೇಶಗಳಲ್ಲಿಯೂ ಅವರು ತಾವು ಭೇಟಿ ನೀಡುವ ಸ್ಥಳಗಳ ಬಗ್ಗೆ ಮುಂಚಿತವಾಗಿ ತಿಳಿಸುತ್ತಿಲ್ಲ ಎಂದು ಖರ್ಗೆ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.
‘ಈ ಹಿಂದೆಯೂ ಈ ರೀತಿಯ ಪತ್ರಗಳನ್ನು ಕಳುಹಿಸಲಾಗಿದೆ. ಅಘೋಷಿತ ಚಲನೆಗಳು ರಾಹುಲ್ ಅವರ ಭದ್ರತೆಗೆ ಅಪಾಯ ತಂದೊಡ್ಡಬಹುದು. ಹೀಗಾಗಿ ನಿಗದಿತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಪತ್ರದಲ್ಲಿ ಹೇಳಲಾಗಿದೆ.
ಕಾಂಗ್ರೆಸ್ ಆಕ್ಷೇಪ: ‘ಮತಕಳ್ಳತನ’ಕ್ಕೆ ಸಂಬಂಧಿಸಿದಂತೆ ಮತ್ತೊಂದು ಭಾರಿ ಅಕ್ರಮವನ್ನು ಬಹಿರಂಗ ಪಡಿಸುವುದಾಗಿ ರಾಹುಲ್ ಗಾಂಧಿ ಅವರು ಹೇಳಿದ ಬೆನ್ನಲ್ಲೇ ಈ ಪತ್ರ ಬಂದಿರುವುದು ಬೆದರಿಸುವ ಯತ್ನವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
‘ಮತಕಳವಿನ ಕುರಿತ ಇನ್ನಷ್ಟು ಸತ್ಯ ಬಹಿರಂಗ ಆಗುತ್ತದೆಯಲ್ಲ ಎಂಬ ಆತಂಕ ಸರ್ಕಾರವನ್ನು ಕಾಡುತ್ತಿದೆಯೇ’ ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.