ADVERTISEMENT

ಮಹಾರಾಷ್ಟ್ರದಂತೆ ಬಿಹಾರದಲ್ಲಿಯೂ ಮ್ಯಾಚ್‌ ಫಿಕ್ಸಿಂಗ್‌: ರಾಹುಲ್‌ ಗಾಂಧಿ ಆರೋಪ

ಬಿಜೆಪಿ ನಾಯಕರಿಂದ ತೀವ್ರ ಆಕ್ಷೇಪ

​ಪ್ರಜಾವಾಣಿ ವಾರ್ತೆ
ಪಿಟಿಐ
Published 7 ಜೂನ್ 2025, 15:27 IST
Last Updated 7 ಜೂನ್ 2025, 15:27 IST
   

ನವದೆಹಲಿ/ನಾಗ್ಪುರ: ‘ಮ‌ಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ಮ್ಯಾಚ್‌ ಫಿಕ್ಸಿಂಗ್‌ ರೀತಿಯಲ್ಲೇ ಬಿಹಾರದಲ್ಲಿಯೂ ನಡೆಯಲಿದೆ. ಬಿಜೆಪಿ ತಾನು ಸೋಲುವ ಎಲ್ಲ ಕಡೆಗಳಲ್ಲಿಯೂ ಮುಂದೆ ಇದೇ ರೀತಿ ಮ್ಯಾಚ್‌ ಫಿಕ್ಸಿಂಗ್ ಮಾಡಿಕೊಳ್ಳುತ್ತದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಶನಿವಾರ ಆರೋಪಿಸಿದರು.

ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಕ್ರಿಯೆಯ ಕುರಿತು ಅನೇಕ ಆಕ್ಷೇಪಗಳನ್ನು ವ್ಯಕ್ತಪಡಿಸಿ ದೇಶದ ನಾನಾ ಪತ್ರಿಕೆಗಳಿಗೆ ರಾಹುಲ್‌ ಗಾಂಧಿ ಅವರು ಸುದೀರ್ಘ ಲೇಖನ ಬರೆದಿದ್ದಾರೆ. 

ಪತ್ರಿಕೆಯೊಂದರಲ್ಲಿ ಪ್ರಕಟವಾದ ಈ ಲೇಖನವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು ಮುಂಬರುವ ಬಿಹಾರ ಚುನಾವಣೆಯಲ್ಲಿಯೂ ಬಿಜೆಪಿ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಳ್ಳಲಿದೆ ಎಂದು ಹೇಳಿ ಪೋಸ್ಟ್ ಹಂಚಿಕೊಂಡಿದ್ದಾರೆ. ರಾಹುಲ್‌ ಅವರ ಲೇಖನ ಮತ್ತು ಅವರ ಪೋಸ್ಟ್‌‌ಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ADVERTISEMENT

ಪಂಜಿನ ಮೆರವಣಿಗೆ:  ‘ಚುನಾವಣೆಯಲ್ಲಿ ಮತಗಳನ್ನು ಹೇಗೆ ಕದಿಯಲಾಯಿತು ಎನ್ನುವ ಮಾದರಿ’ಯ ಕುರಿತು ಜನರನ್ನು ಎಚ್ಚರಿಸುವುದಕ್ಕಾಗಿ ಕಾಂಗ್ರೆಸ್‌ ಪಕ್ಷವು ಇದೇ 12ರಂದು ಮಹಾರಾಷ್ಟ್ರದಾದ್ಯಂತ ಪಂಜಿನ ಮೆರವಣಿಗೆ ನಡೆಸಲಿದೆ. ಇಲ್ಲಿ ಮಾಡಿದಂತೆಯೇ ಬಿಹಾರ ಚುನಾವಣೆಯಲ್ಲಿಯೂ ಮತಗಳನ್ನು ಕದಿಯುವ ಮಾದರಿಯನ್ನು ಅನುಸರಿಸುವ ಯೋಜನೆ ರೂಪಿಸಲಾಗುತ್ತಿದೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಹರ್ಷವರ್ಧನ್‌ ಸಪಕಲ್‌ ತಿಳಿಸಿದರು.

‘ಅಸಂಬದ್ಧ ಆರೋಪ’

ರಾಹುಲ್‌ ಗಾಂಧಿ ಅವರ ಲೇಖನದ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, ‘ತಮ್ಮ ಪರವಾಗಿ ಜನರು ತೀರ್ಪು ನೀಡಿಲ್ಲ ಎನ್ನುವ ಕಾರಣಕ್ಕೆ ಆಯೋಗದ ಮೇಲೆ ‘ಆಧಾರರಹಿತ’ ಆರೋಪ ಮಾಡುವುದು ಅಸಂಬದ್ಧ’ ಎಂದಿದೆ.

‘ಯಾರೇ ಸುಳ್ಳು ಸುದ್ದಿ ಹರಡಿದರೂ ಅದು ಕಾನೂನಿಗೆ ತೋರುವ ಅಗೌರವ ಮಾತ್ರವಲ್ಲ, ಅವರ ಪಕ್ಷವೇ ನೇಮಕ ಮಾಡಿರುವ ಸಾವಿರಾರು ಪ್ರತಿನಿಧಿಗಳಿಗೆ ಮಾಡುವ ಅವಮಾನ. ವಾಸ್ತವಾಂಶಗಳ ಕುರಿತು 2024ರ ಡಿಸೆಂಬರ್‌ನಲ್ಲಿಯೇ ಕಾಂಗ್ರೆಸ್‌ಗೆ ಪತ್ರ ಬರೆದಿದ್ದೇವೆ. ಆದರೆ, ನಾವು ನೀಡಿದ ಸತ್ಯಾಂಶ
ಗಳನ್ನು ನಿರ್ಲಕ್ಷಿಸಿ ಮತ್ತೊಮ್ಮೆ ಅದೇ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ’ ಎಂದು ಅಧಿಕಾರಿಗಳು ಹೇಳಿದರು.

ಆಯೋಗ ಹೇಳಿದ್ದು...

  • 76 ಲಕ್ಷ ಹೆಚ್ಚುವರಿ ಮತದಾರರು ಎಂಬ ಆರೋಪ: ಮತದಾನದ ದಿನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ 6.4 ಕೋಟಿ ಜನರು ತಮ್ಮ ಮತ ಚಲಾಯಿಸಿದ್ದಾರೆ. ಪ್ರತೀ ಗಂಟೆಗೆ ಸುಮಾರು 58 ಲಕ್ಷ ಮತದಾರರು ಮತದಾನ ಮಾಡಿದ್ದಾರೆ. ಇದೇ ಲೆಕ್ಕಾಚಾರದಲ್ಲಿ, 1.16 ಕೋಟಿ ಮತದಾರರು ಮತದಾನದ ಕೊನೇ ಎರಡು ತಾಸಿನಲ್ಲಿ ಮತಚಲಾಯಿಸಿರಬಹುದು. ಆದ್ದರಿಂದ ಎರಡು ಗಂಟೆಯಲ್ಲಿ 65 ಲಕ್ಷ ಮತದಾರರು ಮತದಾನ ಮಾಡುವುದು ಆ ದಿನದ ಸರಾಸರಿಗಿಂತ ಕಡಿಮೆಯೇ ಆದಂತಾಗಿದೆ.

  • ಎಲ್ಲ ಮತಗಟ್ಟೆಯಲ್ಲಿಯೂ ಮತಗಟ್ಟೆ ಏಜೆಂಟರ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಅಥವಾ ಅವರ ಏಜೆಂಟರ ಸಮುಖದಲ್ಲಿಯೇ ಮತದಾನ ನಡೆದಿದೆ. ಆಗಲೇ ಯಾಕೆ ಆ ಪಕ್ಷದ ‌ಏಜೆಂಟರು ಪ್ರಶ್ನಿಸಲಿಲ್ಲ?

  • ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದಲ್ಲಿ ಮತದಾರರ ಏರಿಕೆ ಆರೋಪ: 2019ರ ಚುನಾವಣೆ ಮತ್ತು 2024ರ ಚುನಾವಣೆ ಮಧ್ಯೆ ಮಹಾರಾಷ್ಟ್ರದಲ್ಲಿ ಶೇ 8.14ರಷ್ಟು ಮತದಾರರು ಏರಿಕೆಯಾಗಿದ್ದಾರೆ. ಇದೇ ಅವಧಿಯಲ್ಲಿ ಜಾರ್ಖಂಡ್‌ನಲ್ಲಿ ಶೇ 13.4, ಛತ್ತೀಸಗಢದಲ್ಲಿ ಶೇ 9.93ರಷ್ಟು ಮತದಾರರು ಏರಿಕೆಯಾಗಿದ್ದಾರೆ. 2018ರಿಂದ 2023ರ ಮಧ್ಯೆ, ಮಧ್ಯ ಪ್ರದೇಶದಲ್ಲಿ ಶೇ 7.2, ತೆಲಂಗಾಣದಲ್ಲಿ ಶೇ 16.6ರಷ್ಟು ಮತದಾರರು ಏರಿಕೆಯಾಗಿದ್ದಾರೆ.

  • ಪಟ್ಟಿ ಸಿದ್ಧಗೊಂಡ ಬಳಿಕ ಪಟ್ಟಿಯಲ್ಲಿನ ಸಮಸ್ಯೆಗಳ ಕುರಿತು 9.77 ಕೋಟಿ ಮತದಾರರ ಪೈಕಿ ಕೇವಲ 89 ಜನರು ಜಿಲ್ಲಾ ಮ್ಯಾಜಿಸ್ಟ್ರೇಟರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ ಒಬ್ಬರು ಮಾತ್ರವೇ ಮುಖ್ಯ ಚುನಾವಣಾ ಮ್ಯಾಜಿಸ್ಟ್ರೇಟರ್‌ ಮುಂದೆ ಹಾಜರಾದರು. ಕಾಂಗ್ರೆಸ್‌ ಅಥವಾ ಯಾವುದೇ ಪಕ್ಷವು ಯಾವ ಆಕ್ಷೇಪವನ್ನೂ ಸಲ್ಲಿಸಿಲ್ಲ.

ಪ್ರೀತಿಯ ಆಯೋಗ,

ನಿಮ್ಮದು ಸಾಂವಿಧಾನಿಕ ಸಂಸ್ಥೆ. ಅಧಿಕೃತ ಸಹಿ ಇಲ್ಲದ, ಆರೋಪಗಳಿಗೆ ಬೆನ್ನು ತೋರಿಸಿ ಯಾವುದೋ ಮಧ್ಯವರ್ತಿ ಮುಖೇನ ಹೇಳಿಕೆ ಬಿಡುಗಡೆ ಮಾಡುವುದು ಸರಿಯಲ್ಲ. ಗಂಭೀರ ಪ್ರಶ್ನೆಗಳಿಗೆ ಉತ್ತರಿಸುವ ರೀತಿ ಇದಲ್ಲ. ನಿಮ್ಮ ಬಳಿ ಮುಚ್ಚಿಟ್ಟುಕೊಳ್ಳಲು ಏನೂ ಇಲ್ಲ ಎಂದಾದರೆ, ನನ್ನ ಲೇಖನದಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಸಾಕ್ಷ್ಯಗಳ ಒದಗಿಸುವ ಮೂಲಕ ಉತ್ತರಿಸಿ. ಯಾವೆಲ್ಲಾ ಸಾಕ್ಷ್ಯಗಳು ಬೇಕು:

  • ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಮತ್ತು ಮಹಾರಾಷ್ಟ್ರ ಒಳಗೊಂಡಂತೆ ಎಲ್ಲ ವಿಧಾನಸಭಾ ಚುನಾವಣೆಗಳ ಮತದಾರರ ಪಟ್ಟಿಯನ್ನು ನೀಡಿ. ಇದು ಡಿಜಿಟಲ್‌ ಸ್ವರೂಪದಲ್ಲಿ ಇರಬೇಕು. ಜೊತೆಗೆ, ಕಂಪ್ಯೂಟರ್‌ ಸ್ವಯಂ ಚಾಲಿತವಾಗಿ ಪರಿಶೀಲಿಸಬಹುದಾಗಿ ಸ್ವರೂಪದಲ್ಲಿಯೂ ಇರಲಿ

  • ಮಹಾರಾಷ್ಟ್ರದಲ್ಲಿ ಸಂಜೆ 5ರ ಬಳಿಕ ಎಲ್ಲ ಮತಗಟ್ಟೆಗಳಲ್ಲಿ ನಡೆದ ಮತದಾನದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಬಹಿರಂಗಗೊಳಿಸಿ ಆರೋಪಗಳಿಗೆ ಬೆನ್ನು ಹಾಕಿ ನೀಡುವ ಉತ್ತರಗಳು ನಿಮ್ಮ ವಿಶ್ವಾಸಾರ್ಹತೆಯನ್ನು ರಕ್ಷಿಸುವುದಿಲ್ಲ. ಸತ್ಯ ಮಾತ್ರವೇ ರಕ್ಷಿಸುತ್ತದೆ.

–ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ

‘ನಾಚಿಕೆಗೆಟ್ಟು ಸುಳ್ಳು ಹೇಳುತ್ತಾರೆ’

ರಾಹುಲ್‌ ಗಾಂಧಿ ಅವರು ವಿವಿಧ ಪತ್ರಿಕಗಳಿಗೆ ಬರೆದಿರುವ ಲೇಖನವು ಸುಳ್ಳು ಸಂಕಥನಗಳನ್ನು ಹುಟ್ಟುಹಾಕುತ್ತಿದೆ. ಸಾಲು ಸಾಲು ಚುನಾವಣೆಗಳನ್ನು ಸೋತಿರುವ ಅವರ ದುಃಖ ಮತ್ತು ಹತಾಶೆಯನ್ನು ಈ ಬರಹ ತೋರಿಸುತ್ತದೆ. ಅವರು ಹೇಗೆ ಸುಳ್ಳು ಹೇಳುತ್ತಾರೆ ಎಂದು ನೋಡೋಣ:

ಮೊದಲ ಹಂತ: ರಾಹುಲ್‌ ಅವರ ಅವಿವೇಕದಿಂದಲೇ ಕಾಂಗ್ರೆಸ್‌ ಪಕ್ಷವು ಚುನಾವಣೆಗಳಲ್ಲಿ ಸಾಲು ಸಾಲು ಸೋಲು ಕಾಣುತ್ತಿದೆ

ಎರಡನೇ ಹಂತ: ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಅವರು ವಿಚಿತ್ರವಾದ ಪಿತೂರಿಗಳನ್ನು ಮಾಡುತ್ತಾರೆ ಮತ್ತು ಚುನಾವಣೆಯಲ್ಲಿ ಮೋಸ ಆಗಿದೆ ಎಂದು ಅಳುತ್ತಾರೆ

ಮೂರನೇ ಹಂತ: ಎಲ್ಲ ಸತ್ಯಾಂಶವನ್ನು ಮತ್ತು ದತ್ತಾಂಶವನ್ನು ಅವರು ನಿರ್ಲಕ್ಷಿಸುತ್ತಾರೆ

ನಾಲ್ಕನೇ ಹಂತ: ಯಾವುದೇ ಸಾಕ್ಷ್ಯಗಳಿಲ್ಲದೆ ಸಂಸ್ಥೆಗಳನ್ನು ಅವಮಾನಿಸುತ್ತಾರೆ

ಐದನೇ ಹಂತ: ಸತ್ಯಾಂಶಕ್ಕಿಂತ ಪತ್ರಿಕೆಗಳಲ್ಲಿ ತಲೆಬರಹ ಬರಲಿ ಎಂದು ಆಶಿಸುತ್ತಾರೆ

ಅವರು ಹೇಳುವ ಸುಳ್ಳುಗಳನ್ನು ಪದೇ ಪದೇ ಬಯಲಿಗೆಳೆಯುತ್ತಿದ್ದರೂ ನಾಚಿಕೆಗೆಟ್ಟು ಅವರು ಸುಳ್ಳುಗಳನ್ನು ಹೇಳುತ್ತಲೇ ಇರುತ್ತಾರೆ. ಬಿಹಾರದಲ್ಲಿ ಅವರು ಸೋಲುವುದು ಖಚಿತ. ಅದಕ್ಕಾಗಿಯೇ ಹೀಗೆ ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ನಾಟಕ ಬೇಡ. ಅದಕ್ಕೆ ಸತ್ಯ ಬೇಕು.

–ಜೆ.ಪಿ. ನಡ್ಡಾ, ಬಿಜೆಪಿ ಅಧ್ಯಕ್ಷ

ಬಿಹಾರದಲ್ಲಿ ಕಾಂಗ್ರೆಸ್‌ ಸೋಲಲಿದೆ ಎಂಬುದನ್ನು ರಾಹುಲ್‌ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷವು ಎಂದಿಗೂ ಗೆಲುವು ಸಾಧಿಸುವುದಿಲ್ಲ. ಅವರು ಮಹಾರಾಷ್ಟ್ರದ ಮತದಾರರನ್ನು ಮತ್ತು ಪ್ರಮುಖವಾಗಿ ಮಹಿಳೆಯರನ್ನು ಅವಮಾನಿಸಿದ್ದಾರೆ.
–ದೇವೇಂದ್ರ ಫಡಣವೀಸ್‌, ಮಹಾರಾಷ್ಟ್ರ ಮುಖ್ಯಮಂತ್ರಿ
2009 ಮತದಾರರ ಪಟ್ಟಿಯನ್ನು ರಾಹುಲ್‌ ಅಧ್ಯಯನ ಮಾಡಬೇಕು. ಆಗಿನ ಲೋಕಸಭೆ ಚುನಾವಣೆ ಹೊತ್ತಿಗೆ 7.29 ಕೋಟಿ ಮತದಾರರು ಪಟ್ಟಿಗೆ ಸೇರ್ಪಡೆಗೊಂಡಿದ್ದರು. ವಿಧಾನಸಭೆ ಚುನಾವಣೆ ಹೊತ್ತಿಗೆ ಈ ಸಂಖ್ಯೆಯು 7.59 ಕೋಟಿಯಾಯಿತು. ಆಗ ಕೇಂದ್ರ ಮತ್ತು ರಾಜ್ಯದಲ್ಲಿ ಅವರದ್ದೇ ಸರ್ಕಾರ ಅಧಿಕಾರದಲ್ಲಿತ್ತು. 30 ಲಕ್ಷ ಮತದಾರರು ಹೇಗೆ ಏರಿಕೆಯಾದರು? ಆ ವರ್ಷವೂ ಚುನಾವಣಾ ಆಯೋಗವು ಮನೆ ಮನೆಗೆ ತೆರಳಿ ಮತದಾರರನ್ನು ನೋಂದಾಯಿಸಿಕೊಂಡಿತ್ತು. ಈ ಬಾರಿಯೂ ಆಯೋಗ ಅದನ್ನೇ ಮಾಡಿದೆ. ಸೋಲಿನ ಕರಿನೆರಳಿನಿಂದ ರಾಹುಲ್‌ ಅವರು ಹೊರಬರದ ಹೊರತೂ ಪಕ್ಷ ಬೆಳವಣಿಗೆ ಕಾಣುವುದಿಲ್ಲ .
–ಚಂದ್ರಶೇಖರ್ ಬವನ್‌ಕುಲೆ, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.