ADVERTISEMENT

ರಾಜ್ಯಸಭೆ: ಹೊಸ ವರ್ಷದಲ್ಲಿ 72 ಸ್ಥಾನಗಳಿಗೆ ಚುನಾವಣೆ; NDA ಬಲ ಹೆಚ್ಚಳ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 0:30 IST
Last Updated 31 ಡಿಸೆಂಬರ್ 2025, 0:30 IST
   
73 - 2026ರಲ್ಲಿ ನಿವೃತ್ತರಾಗಲಿರುವ ರಾಜ್ಯಸಭಾ ಸಂಸದರು (ಒಬ್ಬ ನಾಮನಿರ್ದೇಶಿತ ಸದಸ್ಯ ಸೇರಿ) | 22 - ಚುನಾವಣೆಗಳು ನಡೆಯುವ ರಾಜ್ಯಗಳು

ನವದೆಹಲಿ: ಹೊಸ ವರ್ಷ 2026ರಲ್ಲಿ ರಾಜ್ಯಸಭೆಯ 72 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಗಿರುವ ಬಲಾಬಲ ಹಾಗೂ ಮೈತ್ರಿಯ ಶಕ್ತಿಯನ್ನು ಅವಲೋಕಸಿದಾಗ ಎನ್‌ಡಿಎ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.

ವಿವಿಧ ಪಕ್ಷಗಳ ರಾಜ್ಯಸಭಾ ಸದಸ್ಯರ ಅವಧಿ ಅಂತ್ಯಗೊಳ್ಳುವುದರ ಆಧಾರದಲ್ಲಿ ಏಪ್ರಿಲ್‌, ಜೂನ್‌, ಜುಲೈ ಹಾಗೂ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿವೆ.

ಪ್ರಸ್ತುತ, ರಾಜ್ಯಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲ 40 ಇದ್ದು, ಮುಂದಿನ ವರ್ಷ ನಡೆಯುವ ಚುನಾವಣೆಗಳಲ್ಲಿ ಅದು 50 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ. ‘ಇಂಡಿಯಾ’ ಮೈತ್ರಿಕೂಟದ ಸದಸ್ಯರ ಸಂಖ್ಯೆ 25 ಇದ್ದು, ಇದು 5 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ADVERTISEMENT

ರಾಜ್ಯ ವಿಧಾನಸಭೆಗಳಲ್ಲಿ ವಿವಿಧ ಪಕ್ಷಗಳು ಹೊಂದಿರುವ ಸದಸ್ಯರ ಸಂಖ್ಯೆಯನ್ನು ಪರಿಗಣಿಸಿದಾಗ, ಬಿಜೆಪಿಯು 37–38 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಆದರೆ, ಈ ಗೆಲುವು ತನ್ನ ಮಿತ್ರ ಪಕ್ಷಗಳಿಗೆ ಎಷ್ಟು ಸ್ಥಾನಗಳನ್ನು ಬಿಟ್ಟು ಕೊಡಲಿದೆ ಎಂಬುದನ್ನು ಅವಲಂಬಿಸಿದೆ.

ಒಂದು ವೇಳೆ, ಬಿಜೆಪಿಯು ಇಷ್ಟು ಸಂಖ್ಯೆಯ ಸ್ಥಾನಗಳಲ್ಲಿ ಗೆಲ್ಲುವಲ್ಲಿ ವಿಫಲವಾದಲ್ಲಿ ಕಾಂಗ್ರೆಸ್‌ ಪಕ್ಷ 8–9 ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ನ ಶಕ್ತಿ ಸಿನ್ಹ ಗೋಹಿಲ್‌ ಅವರ ಅವಧಿ ಜೂನ್‌ನಲ್ಲಿ ಅಂತ್ಯಗೊಳ್ಳಲಿದೆ. ಆಗ, ರಾಜ್ಯಸಭೆಯಲ್ಲಿ ಗುಜರಾತ್‌ನಿಂದ ಕಾಂಗ್ರೆಸ್‌ ಸದಸ್ಯರೇ ಇಲ್ಲದಂತಾಗಲಿದೆ. ಸಿಪಿಎಂ ಸ್ಥಿತಿಯೂ ಇದೇ ರೀತಿ ಇದೆ. ಪಶ್ಚಿಮ ಬಂಗಾಳದಿಂದ ಆಯ್ಕೆಯಾಗಿರುವ ವಿಕಾಶ್ ರಂಜನ್‌ ಭಟ್ಟಾಚಾರ್ಯ ಅವರ ಅವಧಿ ಏಪ್ರಿಲ್‌ನಲ್ಲಿ ಮುಗಿಯಲಿದೆ. ಆಗ, ರಾಜ್ಯಸಭೆಯಲ್ಲಿ ಕೇರಳದಿಂದ ಮಾತ್ರ ಸಿಪಿಎಂ ತನ್ನ ಪ್ರತಿನಿಧಿಯನ್ನು ಹೊಂದಿರಲಿದೆ. 

ಎನ್‌ಸಿಪಿಯ(ಶರದ್‌ ಪವಾರ್) ಇಬ್ಬರು ಸಂಸದರ ಅವಧಿ ಕೂಡ ಮುಗಿಯಲಿದೆ. ಆದರೆ, ಮಹಾ ವಿಕಾಸ್‌ ಅಘಾಡಿ(ಎಂವಿಎ) ಒಳಜಗಳದಿಂದಾಗಿ, ಪಕ್ಷವು ರಾಜ್ಯಸಭೆಯಲ್ಲಿ ಮತ್ತೆ ತನ್ನ ಪ್ರಾತಿನಿಧ್ಯ ಹೊಂದುವುದು ಕಷ್ಟವಾಗಲಿದೆ.

ಬಲಾಬಲ:

ಪ್ರಸ್ತುತ ರಾಜ್ಯಸಭೆಯಲ್ಲಿ, 7 ನಾಮನಿರ್ದೇಶಿತ ಸದಸ್ಯರನ್ನು ಸೇರಿ ಬಿಜೆಪಿ ನೇತೃತ್ವದ ಎನ್‌ಡಿಎ 135 ಸಂಸದರ ಬೆಂಬಲ ಹೊಂದಿದೆ. ‘ಇಂಡಿಯಾ’ ಒಕ್ಕೂಟವು 80 ಸಂಸದರ ಬೆಂಬಲ ಇದೆ. 29 ಸಂಸದರು ಯಾವ ಮೈತ್ರಿಕೂಟದ ಭಾಗವೂ ಆಗಿಲ್ಲ.

ಮುಂದಿನ ವರ್ಷ ನವೆಂಬರ್‌ ವೇಳೆಗೆ ಎಲ್ಲ ಸ್ಥಾನಗಳಿಗೆ ಚುನಾವಣೆ ಪೂರ್ಣಗೊಂಡಾಗ, ರಾಜ್ಯಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲ 145 ತಲುಪುವ ಸಾಧ್ಯತೆ ಇದ್ದರೆ, ‘ಇಂಡಿಯಾ’ ಒಕ್ಕೂಟದ ಸದಸ್ಯರ ಸಂಖ್ಯೆ 75ಕ್ಕೆ ತಲುಪುವ ಸಾಧ್ಯತೆ ಇದೆ.

ಅವಧಿ ಅಂತ್ಯವಾಗಲಿರುವ ಪ್ರಮುಖ ನಾಯಕರು

ಮಲ್ಲಿಕಾರ್ಜುನ ಖರ್ಗೆ, ಹರಿವಂಶ, ಎಚ್‌.ಡಿ.ದೇವೇಗೌಡ, ಶರದ್‌ ಪವಾರ್, ರಾಮಗೋಪಾಲ್‌ ಯಾದವ, ಹರದೀಪ್ ಸಿಂಗ್‌ ಪುರಿ, ರಾಮದಾಸ್‌ ಆಠವಳೆ, ದಿಗ್ವಿಜಯ್ ಸಿಂಗ್, ಅಭಿಷೇಕ್‌ ಸಿಂಘ್ವಿ, ತಿರುಚ್ಚಿ ಶಿವ, ಉಪೇಂದ್ರ ಕುಶ್ವಾಹ, ಪ್ರಿಯಾಂಕಾ ಚತುರ್ವೇದಿ, ನಿವೃತ್ತ ಸಿಜೆಐ ರಂಜನ್ ಗೋಗೊಯಿ(ನಾಮನಿರ್ದೇಶಿತ) 

ಪ್ರಮುಖ ಅಂಶಗಳು

* ಜೂನ್‌ ಬಳಿಕ 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಪ್ರತಿನಿಧಿಗಳು ಇಲ್ಲದಂತಾಗಲಿದೆ

* ಆಂಧ್ರಪ್ರದೇಶದಲ್ಲಿ ಟಿಡಿಪಿ ನೇತೃತ್ವದ ಎನ್‌ಡಿಎ ಎಲ್ಲ ನಾಲ್ಕು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ

* ಬಿಜೆಪಿಯು ಆಂಧ್ರಪ್ರದೇಶದಲ್ಲಿ ಹೆಚ್ಚುವರಿಯಾಗಿ ಒಂದು ಸ್ಥಾನ ಗೆಲ್ಲಲಿದ್ದರೆ ಒಡಿಶಾದಲ್ಲಿ ತನ್ನ ಸಂಖ್ಯಾಬಲವನ್ನು ನಾಲ್ಕಕ್ಕೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ

* ಜಾರ್ಖಂಡ್‌ನಲ್ಲಿ ಬಿಜೆಪಿಗೆ ಒಂದು ಸ್ಥಾನ ನಷ್ಟವಾಗಬಹುದು

* ಕಾಂಗ್ರೆಸ್‌ ಪಕ್ಷ ಮಹಾರಾಷ್ಟ್ರ ಛತ್ತೀಸಗಢ ಹಾಗೂ ಗುಜರಾತ್‌ನಲ್ಲಿ ತಲಾ ಒಂದು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಹರಿಯಾಣ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದಲ್ಲಿ ಹೆಚ್ಚುವರಿಯಾಗಿ ತಲಾ ಒಂದು ಸೀಟು ಗೆಲ್ಲಬಹುದು 

* ಬಿಹಾರದಲ್ಲಿ 5 ಸ್ಥಾನಗಳಿಗೆ ಚುನಾವಣೆ ನಡೆಯುವುದು. ಆರ್‌ಜೆಡಿ ಹಾಗೂ ಜೆಡಿಯು ತಲಾ ಇಬ್ಬರು ಸದಸ್ಯರನ್ನು ಹೊಂದಿದ್ದರೆ ಆರ್‌ಎಲ್‌ಎಂ ಒಬ್ಬ ಸಂಸದನನ್ನು ಹೊಂದಿದೆ. ಈಗ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಇರುವ ಕಾರಣ ಬಿಜೆಪಿ ಎರಡು ಸ್ಥಾನಗಳಿಗೆ ಪಟ್ಟು ಹಿಡಿಯಬಹುದು. ಉಳಿದ ಒಂದು ಸ್ಥಾನಕ್ಕಾಗಿ ವಿರೋಧ ಪಕ್ಷಗಳ ನಡುವೆ ಪೈಪೋಟಿ ಏರ್ಪಡಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.