ಕೋಲ್ಕತ್ತ: ದಕ್ಷಿಣ ಕೋಲ್ಕತ್ತದ ಕಾನೂನು ಕಾಲೇಜು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯನ್ನು ನ್ಯಾಯಾಲಯವು ಜುಲೈ 8ರವರೆಗೆ ವಿಸ್ತರಿಸಿದೆ.
ಪ್ರಮುಖ ಆರೋಪಿ, ಕಾಲೇಜಿನ ಹಳೆಯ ವಿದ್ಯಾರ್ಥಿ ಮೊನೊಜಿತ್ ಮಿಶ್ರಾ, ಪ್ರಸ್ತುತ ಕಾಲೇಜಿನ ವಿದ್ಯಾರ್ಥಿಗಳಾದ ಜೈಬ್ ಅಹ್ಮದ್ ಮತ್ತು ಪ್ರಮಿತ್ ಮುಖರ್ಜಿ ಅವರನ್ನು ಕಳೆದ ಗುರುವಾರ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಆರಂಭದಲ್ಲಿ ಆರೋಪಿಗಳನ್ನು 4 ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು.
ಕಸ್ಟಡಿ ಅವಧಿ ಮುಗಿದ ನಂತರ ನಿನ್ನೆ (ಸೋಮವಾರ) ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ಜುಲೈ 8ರವರೆಗೆ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಭದ್ರತಾ ಸಿಬ್ಬಂದಿ ಪಿನಾಕಿ ಬ್ಯಾನರ್ಜಿ ಅವರನ್ನು ಶನಿವಾರ ಬಂಧಿಸಲಾಗಿದ್ದು, ಮಂಗಳವಾರದವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಆದರೆ ಬ್ಯಾನರ್ಜಿಯ ಪೊಲೀಸ್ ಕಸ್ಟಡಿ ಅವಧಿಯನ್ನು ಜುಲೈ 4 ರವರೆಗೆ ವಿಸ್ತರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಜೂನ್ 25 ರಂದು ದಕ್ಷಿಣ ಕೋಲ್ಕತ್ತ ಕಾನೂನು ಕಾಲೇಜು ಕಸ್ಬಾ ಕ್ಯಾಂಪಸ್‌ನಲ್ಲಿ ಈ ಘಟನೆ ನಡೆದಿತ್ತು.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಲೇಜಿನ ಹಳೆಯ ವಿದ್ಯಾರ್ಥಿಯು ಅದೇ ಕಾಲೇಜಿನಲ್ಲಿ ಗುತ್ತಿಗೆ ಆಧಾರದಲ್ಲಿ ಬೋಧಕೇತರ ಸಿಬ್ಬಂದಿಯಾಗಿದ್ದ. ಅಲ್ಲದೇ, ಅಲಿಪೋರ್ ಪೊಲೀಸ್ ಹಾಗೂ ಸೆಷನ್ ಕೋರ್ಟ್‌ನಲ್ಲಿ ಕ್ರಿಮಿನಲ್ ವಕೀಲನಾಗಿ ಕಾರ್ಯನಿರ್ವಹಿಸುತ್ತಿದ್ದನು ಎಂದು ವರದಿಯಾಗಿತ್ತು.
ಈ ನಡುವೆ ಪ್ರಕರಣದ ಪ್ರಮುಖ ಆರೋಪಿಯನ್ನು ಕಾಲೇಜಿನ ಆಡಳಿತ ಮಂಡಳಿ ಕೆಲಸದಿಂದ ಉಚ್ಚಾಟಿಸಿದೆ. ಇತರ ಇಬ್ಬರು ಆರೋಪಿಗಳನ್ನೂ ಕಾಲೇಜಿನಿಂದ ಹೊರಹಾಕಲಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.