ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಸಂಬಂಧ ಕೇಂದ್ರ ತನಿಖಾ ದಳ (ಸಿಬಿಐ) ಅಂತಿಮ ವರದಿಯನ್ನು ಸಲ್ಲಿಸಿರುವುದನ್ನು ನಟಿ ರಿಯಾ ಚಕ್ರವರ್ತಿ ಅವರ ವಕೀಲ ಸತೀಶ್ ಮಾನೆಶಿಂದೆ ಸ್ವಾಗತಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಕರಣದ ಪ್ರತಿಯೊಂದು ಅಂಶವನ್ನು ಎಲ್ಲಾ ಅಯಾಮಗಳಿಂದ ಕೂಲಂಕಷವಾಗಿ ತನಿಖೆ ಮಾಡಿ ಅಂತಿಮ ವರದಿ ಸಲ್ಲಿಸಿದ್ದಕ್ಕಾಗಿ ಸಿಬಿಐಗೆ ನಾವು ಕೃತಜ್ಞರಾಗಿರುತ್ತೇವೆ’ ಎಂದು ಅವರು ಹೇಳಿದ್ದಾರೆ.
ಸಿಬಿಐ ತನ್ನ ವರದಿಯನ್ನು ಶನಿವಾರ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ವರದಿಯನ್ನು ಸ್ವೀಕರಿಸಬೇಕೇ ಅಥವಾ ಏಜೆನ್ಸಿಯಿಂದ ಹೆಚ್ಚಿನ ತನಿಖೆಗೆ ಆದೇಶಿಸಬೇಕೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2020ರ ಜೂನ್ 14ರಂದು ಸುಶಾಂತ್ ಸಿಂಗ್ ಅವರ ಮೃತದೇಹ ಮುಂಬೈನ ಬಾಂದ್ರಾದಲ್ಲಿರುವ ಅವರ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮುಂಬೈ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಅವರು, ನಟಿ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದವರು ಸುಶಾಂತ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ 2020ರ ಜುಲೈ 25ರಂದು ಪಟ್ನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ರಿಯಾ ಚಕ್ರವರ್ತಿ ಕೂಡ ಸುಶಾಂತ್ ಕುಟುಂಬಸ್ಥರ ವಿರುದ್ಧ ಮುಂಬೈನಲ್ಲಿ ಪ್ರತಿ ದೂರು ದಾಖಲಿಸಿದ್ದರು.
ಬಳಿಕ 2020ರ ಆಗಸ್ಟ್‌ನಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ನಾಲ್ಕು ವರ್ಷಗಳ ತನಿಖೆಯ ನಂತರ ಸಿಬಿಐ ಇಂದು ಅಂತಿಮ ವರದಿಯನ್ನು ಸಲ್ಲಿಸಿದೆ. ರಿಯಾ ಮತ್ತು ಅವರ ಕುಟುಂಬದವರ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಹಾಗಾಗಿ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.