ADVERTISEMENT

ಬಿಹಾರ ಚುನಾವಣಾ ಫಲಿತಾಂಶ: ತೇಜಸ್ವಿ, ತೇಜ್‌ಪ್ರತಾಪ್, ಚಿರಾಗ್ ಒಡ್ಡಿದ ಸವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2020, 14:14 IST
Last Updated 10 ನವೆಂಬರ್ 2020, 14:14 IST
ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್
ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್   

ಪಟ್ನಾ: ಬಿಹಾರ ಚುನಾವಣೆ ಫಲಿತಾಂಶ ಪ್ರಗತಿಯಲ್ಲಿದ್ದು, ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. ಆದಾಗ್ಯೂ ಮಹಾಮೈತ್ರಿಯ ನೇತೃತ್ವ ವಹಿಸಿಕೊಂಡಿರುವ ಆರ್‌ಜೆಡಿಯು ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಯುಗೆ ತೀವ್ರ ಸ್ಪರ್ಧೆ ಒಡ್ಡಿದೆ. ಯುವ ನಾಯಕರಾದ ತೇಜಸ್ವಿ ಯಾದವ್, ತೇಜ್‌ಪ್ರತಾಪ್ ಯಾದವ್ ಆಡಳಿತ ಪಕ್ಷಕ್ಕೆ ಸವಾಲೊಡ್ಡಿದ್ದು ಒಂದೆಡೆಯಾದರೆ, ಕೇಂದ್ರದಲ್ಲಿ ಸ್ವತಃ ಎನ್‌ಡಿಎ ಮಿತ್ರಪಕ್ಷವಾಗಿರುವ ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಸಹ ನಿತೀಶ್ ಆಡಳಿತದ ವಿರುದ್ಧ ಸಿಡಿದೆದ್ದು ಪ್ರತ್ಯೇಕವಾಗಿಯೇ ಚುನಾವಣೆ ಎದುರಿಸಿದ್ದಾರೆ.

ತೇಜಸ್ವಿ ಒಡ್ಡಿದ ಸವಾಲು: ಆರ್‌ಜೆಡಿ ಹಿರಿಯ ನಾಯಕ ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಈ ಬಾರಿ ಬಿಹಾರ ಚುನಾವಣೆಯಲ್ಲಿ ಮಹಾಮೈತ್ರಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ನಡೆಸುತ್ತಿದ್ದ ಚುನಾವಣಾ ಪ್ರಚಾರ ರ್‍ಯಾಲಿಗಳಲ್ಲಿ ಸೇರುತ್ತಿದ್ದ ಜನಸಮೂಹವೇ ಈ ಯುವ ನಾಯಕ ಸರ್ಕಾರಕ್ಕೆ ಸವಾಲೊಡ್ಡುವುದರಲ್ಲಿ ಸಂಶಯವಿಲ್ಲ ಎಂಬುದನ್ನು ಸೂಚಿಸಿದ್ದವು ಎಂದಿದ್ದಾರೆ ರಾಜಕೀಯ ವಿಶ್ಲೇಷಕರು.

ತಮ್ಮ ವಿರುದ್ಧ ಆಡಳಿತಾರೂಢ ಜೆಡಿಯು, ಬಿಜೆಪಿ ನಾಯಕರು ಮಾಡುತ್ತಿದ್ದ ವೈಯಕ್ತಿಕ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ತೇಜಸ್ವಿ, ವಲಸೆ ಕಾರ್ಮಿಕರ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಸರ್ಕಾರದ ವೈಫಲ್ಯಗಳನ್ನೇ ಪ್ರಚಾರದ ವೇಳೆ ಪ್ರಸ್ತಾಪಿಸಿದ್ದರು. ಪ್ರತಿ ದಿನ 15ರಷ್ಟು ರ್‍ಯಾಲಿಗಳನ್ನು ನಡೆಸಿದ್ದಾರೆ.

ತೇಜ್ ಪ್ರತಾಪ್ ಯಾದವ್: ಲಾಲು ಪ್ರಸಾದ್ ಯಾದವ್‌ರ ಮತ್ತೊಬ್ಬ ಪುತ್ರ, ಮಹಾಮೈತ್ರಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ತೇಜ್ ಪ್ರತಾಪ್ ಯಾದವ್ ಕೂಡ ಬಿಹಾರ ಚುನಾವಣೆಯಲ್ಲಿ ಕಂಡುಬಂದ ಮತ್ತೊಂದು ಯುವ ಮುಖ. ಸಹೋದರ ತೇಜಸ್ವಿ ಯಾದವ್ ಜತೆಗೂಡಿ ಮಹಾಮೈತ್ರಿಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಇಬ್ಬರು ನಾಯಕರ ಪರಿಶ್ರಮದ ಫಲವಾಗಿ ಆರ್‌ಜೆಡಿಯು 75 ಕ್ಷೇತ್ರಗಳಲ್ಲಿ ಮುನ್ನಡೆ (ಸಂಜೆ 7ರ ವೇಳೆಗೆ) ಸಾಧಿಸಿದೆ.

ಚಿರಾಗ್ ಪಾಸ್ವಾನ್: ಕೇಂದ್ರದಲ್ಲಿ ಎನ್‌ಡಿಎ ಮಿತ್ರಪಕ್ಷವಾಗಿರುವ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸಹ ಬಿಹಾರ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಸವಾಲೊಡ್ಡಿದ ಮತ್ತೊಬ್ಬ ಯುವ ನಾಯಕ. 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 2 ಸ್ಥಾನಗಳನ್ನು ಪಡೆದಿದ್ದ ಎಲ್‌ಜೆಪಿ ಈ ಬಾರಿ ಇನ್ನೂ ಖಾತೆ ತೆರೆದಿಲ್ಲ. ಆದಾಗ್ಯೂ, ಚಿರಾಗ್ ಪಾಸ್ವಾನ್ ನಡೆಯು ಆಡಳಿತಾರೂಢ ಜೆಡಿಯುವನ್ನು ಕಳವಳಕ್ಕೀಡುಮಾಡಿತ್ತು ಎಂದಿವೆ ಮೂಲಗಳು.

ಕೇಂದ್ರದ ಮಾಜಿ ಸಚಿವ, ದಿ. ರಾಮ್ ವಿಲಾಸ್ ಪಾಸ್ವಾನ್ ಪುತ್ರರಾಗಿರುವ ಚಿರಾಗ್ ಅವರು ಇತ್ತೀಚಿನ ದಿನಗಳಲ್ಲಿ ಸಿಎಂ ನಿತೀಶ್ ಕುಮಾರ್ ಅವರನ್ನು ವಿರೋಧಿಸುತ್ತಲೇ ಬಂದವರು. ‘ನಿತೀಶ್ ಅವರ ಜೆಡಿಯು ತಮ್ಮ ಪಕ್ಷದ ವಿರುದ್ಧ ಕೆಲಸ ಮಾಡಿತ್ತು. ನಿತೀಶ್ ಅವರು ತಂದೆಗೆ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಿದ್ದ ಅವರು, ಜೆಡಿಯು ಜತೆ ಮೈತ್ರಿ ಮಾಡಿಕೊಳ್ಳುವುದಾದರೆ ತಮ್ಮ ಪಕ್ಷ ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದರು. ಅದರಂತೆಯೇ ನಡೆದಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಭಾಗವಾಗಿದ್ದರೂ ಬಿಹಾರದಲ್ಲಿ ಪ್ರತ್ಯೇಕವಾಗಿ ಎಲ್‌ಜೆಪಿ ಚುನಾವಣೆ ಎದುರಿಸಿದೆ. ಆದರೆ ಈ ಬಗ್ಗೆ ಕೇಂದ್ರದ ಬಿಜೆಪಿ ನಾಯಕರಾರೂ ಪ್ರತಿಕ್ರಿಯೆಯನ್ನೇ ನೀಡಿರಲಿಲ್ಲ. ನಿತೀಶ್ ಅವರು ಮತ್ತೆ ಮುಖ್ಯಮಂತ್ರಿಯಾದರೆ ಎನ್‌ಡಿಎಯಿಂದ ಹೊರನಡೆಯುವುದಾಗಿಯೂ ಚಿರಾಗ್ ಇತ್ತೀಚೆಗೆ ಹೇಳಿದ್ದರು. ಆಗಲೂ ಬಿಜೆಪಿ ಮೌನ ತಾಳಿತ್ತು. ಎಲ್‌ಜೆಪಿ ಹಾಗೂ ಚಿರಾಗ್ ಕುರಿತ ನಿಲುವನ್ನು ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಜೆಡಿಯು ಆಗ್ರಹಿಸಿತ್ತು.

ಇವರಿಷ್ಟೇ ಅಲ್ಲದೆ, ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಅವರ ಪುತ್ರ ಲವ ಸಿನ್ಹಾ ಸೇರಿದಂತೆ ಅನೇಕ ಯುವ ಅಭ್ಯರ್ಥಿಗಳು ಈ ಬಾರಿ ಬಿಹಾರ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.