
ರೊಬೋಟಿಕ್ ಆನೆ
Credit: Instagram/@pfciindia
ಸಾಮಾನ್ಯವಾಗಿ ದೇವರ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಆನೆಗಳನ್ನು ಬಳಕೆ ಮಾಡುತ್ತೇವೆ. ಮೈಸೂರು ದಸರಾದಲ್ಲಿ ಇಂದಿಗೂ ಆನೆಯು ಅಂಬಾರಿ ಹೊರುವುದನ್ನು ಕಾಣಬಹುದು. ಆದರೆ, ಮುಂದಿನ ದಿನಗಳಲ್ಲಿ ಜೀವಂತ ಆನೆಗಳು ಮಾಡುವ ಕೆಲಸವನ್ನು ರೋಬೋಟಿಕ್ ಆನೆಗಳು ಮಾಡುವ ಸಾಧ್ಯತೆ ದಟ್ಟವಾಗಿದೆ.
ಹೌದು, ಚೆನ್ನೈನ ಶಕ್ತಿ ವಿನಾಯಗರ್ ದೇವಸ್ಥಾನಕ್ಕೆ ಬಾಲಿವುಡ್ ನಟ ಸೋನು ಸೂದ್ ಅವರ ಮಗ ಅಯಾನ್ ಸೇರಿ ಪೆಟಾ ಇಂಡಿಯಾ ಮತ್ತು ಪೀಪಲ್ ಫಾರ್ ಕ್ಯಾಟಲ್ ಇನ್ ಇಂಡಿಯಾ ಸಹಯೋಗದಲ್ಲಿ ಜೀವಂತ ಆನೆಯನ್ನು ಹೋಲುವ ‘ಐರಾವತಮ್’ ಎಂಬ ರೊಬೋಟಿಕ್ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ದೇವಾಲಯದಲ್ಲಿ ಉತ್ಸವದ ವೇಳೆ ದೇವರ ಮೂರ್ತಿ ಹೊರಲು ಜೀವಂತ ಆನೆಯನ್ನು ಬಳಸಲಾಗುತಿತ್ತು. ಆದರೆ ಆ ಜೀವಂತ ಆನೆಯ ಜಾಗವನ್ನು ರೊಬೋಟಿಕ್ ಆನೆ ತುಂಬಿದೆ. ಈ ಆನೆ 5 ವಿದ್ಯುತ್ ಮೋಟಾರ್‌ಗಳಿಂದ ಯಾಂತ್ರಿಕವಾಗಿ ಚಲಿಸುತ್ತದೆ. ಐರಾವತಮ್ ಆನೆ ತಮಿಳುನಾಡಿನ ಇತಿಹಾಸದಲ್ಲಿ ಹೊಸ ಧಾರ್ಮಿಕ ಬದಲಾವಣೆ ಮೂಡಿಸಿದೆ.
ಆನೆಯ ವಿಶೇಷತೆ ಏನು?
ಐರಾವತಮ್ ಎಂಬ ರೊಬೋಟಿಕ್ ಆನೆ ಐದು ವಿದ್ಯುತ್ ಮೋಟಾರ್‌ಗಳಿಂದ ಚಲಿಸುತ್ತದೆ. ಸುಮಾರು 3 ಮೀ. ಎತ್ತರವಿದೆ. ಆನೆಯ ಮೇಲ್ಮೈಯನ್ನು ಫೈಬರ್ ಸೇರಿದಂತೆ ಇತರೆ ವಸ್ತುಗಳಿಂದ ತಯಾರಿಸಲಾಗಿದೆ. ಮೈಮೇಲೆ ಆಸನವನ ಜೋಡಿಸುವ ವ್ಯವಸ್ಥೆ ಕೂಡ ಇದೆ.
ಆನೆ 500 ಕೆ.ಜಿ ತೂಕವಿದ್ದು, ಚಕ್ರದ ಮೂಲಕ ಚಲಿಸಬಲ್ಲದು. ಜೀವಂತ ಆನೆಯಂತೆ ತಲೆ, ಕಿವಿ, ಹಾಗೂ ಬಾಲವನ್ನು ಅಲುಗಾಡಿಸುತ್ತದೆ. ಜೊತೆಗೆ ಸೊಂಡಿಲಿನಲ್ಲಿ ನೀರನ್ನು ಸಿಂಪಡಿಸುವ ಸಾಮರ್ಥ್ಯ ಈ ರೊಬೋಟಿಕ್ ಆನೆಗಿದೆ.
ಪೆಟಾ ಇಂಡಿಯಾದ ಯುವ ಪ್ರಶಸ್ತಿ ವಿಜೇತ ಸೋನು ಸೂದ್, ಅವರ ಮಗ ಅಯಾನ್ ಮಾತನಾಡಿ, ‘ಈ ಉಪಕ್ರಮದಿಂದ ನಿಜವಾದ ಆನೆಗಳು ಕಾಡಿನಲ್ಲಿ ತಮ್ಮ ಕುಟುಂಬಗಳೊಂದಿಗೆ ಬದುಕಲು ಅನುವು ಮಾಡಿಕೊಡುತ್ತದೆ’ ಎಂದು ಹೇಳಿದ್ದಾರೆ. ಇದು ಪೆಟಾ ಇಂಡಿಯಾದ ಸಹಯೋಗದಲ್ಲಿ ದೇಶದಾದ್ಯಂತ ನಿಯೋಜನೆಯಾದ 21ನೇ ರೊಬೋಟಿಕ್ ಆನೆಯಾಗಿದ್ದು, ತಮಿಳುನಾಡಿನಲ್ಲಿರುವ ಎರಡನೇ ಆನೆಯಾಗಿದೆ.
ದೇವಾಲಯದ ಅಧ್ಯಕ್ಷ ಎಸ್.ಎಸ್. ಮುರುಗನ್ ರೊಬೋಟಿಕ್ ಆನೆಯನ್ನು ಸ್ವಾಗತಿಸಿದ್ದು, ‘ಇನ್ನುಮುಂದೆ ದೇವಾಲಯ ತನ್ನ ಕಾರ್ಯಗಳಿಗೆ ಎಂದಿಗೂ ಜೀವಂತ ಆನೆಯನ್ನು ಬಳಸುವುದಿಲ್ಲ’, ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.